ನವದೆಹಲಿ: ವಂದೇ ಮಾತರಂ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ಅವರು ವಂದೇ ಮಾತರಂನ ವೈಭವವನ್ನು ಚುನಾವಣೆ ಜೊತೆಗೆ ತಳುಕು ಹಾಕುವ ಮೂಲಕ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಚರ್ಚೆಯಲ್ಲಿ ಮಾತನಾಡಿದ ಅಮಿತ್ ಶಾ, ವಂದೇ ಮಾತರಂ ಗೀತೆಯ ಮೂಲ ಭಾವ, ಇತಿಹಾಸ ಮತ್ತು ಅದರಲ್ಲಿ ಅಡಕವಾಗಿರುವ ದೇಶಭಕ್ತಿಯ ಬಗ್ಗೆ ಉಲ್ಲೇಖಿಸಿದರು. ಬಂಕಿಮ್ ಚಂದ್ರ ಚಟರ್ಜಿ ಬರೆದಿದ್ದರೂ, ಗೀತೆ ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತವಲ್ಲ; ವಿಶ್ವದ ಯಾವುದೇ ಮೂಲೆಯಲ್ಲಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಇದು ಸ್ಫೂರ್ತಿ ಮೂಲ ಎಂದು ಅವರು ಹೇಳಿದರು.
“ವಂದೇ ಮಾತರಂ 50ನೇ ವರ್ಷಾಚರಣೆಯ ವೇಳೆ ಜವಾಹರಲಾಲ್ ನೆಹರು ಗೀತೆಯನ್ನು ಇಬ್ಬಾಗ ಮಾಡಿ ಕೇವಲ ಎರಡು ಚರಣಗಳಷ್ಟೇ ಹಾಡುವಂತೆ ಮಿತಿಗೊಳಿಸಿದರು. ಇದೇ ತುಷ್ಟಿಕರಣ ರಾಜಕೀಯದ ಆರಂಭ. ವಂದೇ ಮಾತರಂ ಅನ್ನು ವಿಭಜಿಸದಿದ್ದರೆ ದೇಶವೂ ವಿಭಜನೆಯಾಗುತ್ತಿರಲಿಲ್ಲ ಎಂಬುದು ನನ್ನ ನಂಬಿಕೆ.” ಎಂದು ಅಮಿತ್ ಶಾ ಆರೋಪಿಸಿದರು.
ಅಮಿತ್ ಶಾ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ವಂದೇ ಮಾತರಂ ಗೀತೆಯನ್ನು ರಾಷ್ಟ್ರದ ಕಾರ್ಯಕ್ರಮಗಳಲ್ಲಿ ಹಾಡುವ ಪರಂಪರೆಯನ್ನು ಕಾಂಗ್ರೆಸ್ ಹುಟ್ಟುಹಾಕಿದೆ ಎಂದು ನೆನಪಿಸಿದರು. “ವಂದೇ ಮಾತರಂ ಎಂದೇ ನನ್ನ ಭಾಷಣ ಆರಂಭಿಸುತ್ತೇನೆ. ಈ ಗೀತೆಯನ್ನು ರಾಷ್ಟ್ರಘೋಷಣೆಯ ಮಟ್ಟಕ್ಕೆ ತೆಗೆದು ತಂದದ್ದು ಕಾಂಗ್ರೆಸ್. 1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸರ್ವಾನುಮತದಲ್ಲಿ ಕೇವಲ ಎರಡು ಚರಣಗಳನ್ನು ಹಾಡುವಂತೆ ನಿರ್ಧರಿಸಿತ್ತು. ನೆಹರು ಒಬ್ಬರೇ ಇದು ಮಾಡಿದರೆಂದು ಹೇಳುವುದು ಇತಿಹಾಸದ ತಿರುಚು,” ಎಂದು ಖರ್ಗೆ ಗರಂ ಆದರು.
ಇನ್ನು, ಬಿಜೆಪಿ ಪ್ರತಿಪಕ್ಷದ ಮೇಲೆ ‘ಮುಸ್ಲಿಂ ತುಷ್ಟಿಕರಣ’ ಆರೋಪ ಮಾಡುತ್ತಿರುವ ಸಂದರ್ಭದಲ್ಲಿ, ತಮ್ಮದೇ ಇತಿಹಾಸ ಬಿಚ್ಚಿಡಬೇಕು ಎಂದು ಖರ್ಗೆ ಕಟುವಾಗಿ ಹೇಳಿದರು. “ಬಂಗಾಳದಲ್ಲಿ ಮುಸ್ಲಿಂ ಲೀಗ್ ಜೊತೆ ಕೈಜೋಡಿಸಿ ಸರ್ಕಾರ ಮಾಡಿದವರು ಯಾರು? ಜನರ ಸಮಸ್ಯೆಗಳನ್ನು ಚರ್ಚಿಸುವುದೇ ಭಾರತ್ ಮಾತಾ ಗೆ ಗೌರವ. ಸಂಸತ್ತನ್ನು ಬೇರೆ ದಿಕ್ಕಿಗೆಳೆದರೆ ಅದು ದೇಶಭಕ್ತಿ ಅಲ್ಲ,” ಎಂದು ಪ್ರತಿಕ್ರಿಯಿಸಿದರು.
ಈ ಚರ್ಚೆಗೆ ಸಂಬಂಧಿಸಿದಂತೆ ಸಂಸದ ಪ್ರಿಯಾಂಕಾ ಗಾಂಧಿಯವರ ಹೇಳಿಕೆ ವೈರಲ್ ಆಗಿದೆ. “150 ವರ್ಷಗಳಿಂದ ವಂದೇ ಮಾತರಂ ನಮ್ಮ ಹೃದಯದಲ್ಲಿದೆ. 75 ವರ್ಷಗಳಿಂದ ದೇಶ ಸ್ವತಂತ್ರ. ಇದೀಗ ಏಕೆ ಈ ಚರ್ಚೆ? ಸರ್ಕಾರ ಚುನಾವಣಾ ಸುಧಾರಣೆಗಳನ್ನು ಚರ್ಚಿಸಲು ತಪ್ಪಿಸುತ್ತಿದೆ. ಬಂಗಾಳ ಚುನಾವಣೆಗೆ ಮುನ್ನ ಜನರ ಗಮನ ಬೇರಡೆಗೆ ತಿರುಗಿಸುವ ರಾಜಕೀಯ ತಂತ್ರ ಮಾತ್ರ ಇದು,” ಎಂದು ಆಕ್ರೋಶ ವ್ಯಕ್ತಪಡಿಸಿದರು.





