ದೆಹಲಿ, ಡಿಸೆಂಬರ್ 4: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಗುರುವಾರ ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಪಾಲಮ್ ತಾಂತ್ರಿಕ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನದಿಂದ ಇಳಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಕೊನೆಯ ಬಾರಿಗೆ 2021ರಲ್ಲಿ ಭಾರತಕ್ಕೆ ಆಗಮಿಸಿದ್ದ ಪುಟಿನ್ ಅವರಿಗೆ ಈ ಬಾರಿ ಭರ್ಜರಿ ಸ್ವಾಗತ ಸಿಕ್ಕಿದೆ. ಇಂದು ರಾತ್ರಿ ಪ್ರಧಾನಿ ಮೋದಿ ಅವರು ಪುಟಿನ್ ತಂಡಕ್ಕೆ ವಿಶೇಷ ಔತಣಕೂಟದ ಆಯೋಜನೆ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸಮಾರಂಭದೊಂದಿಗೆ ಅಧಿಕೃತ ಸ್ವಾಗತ ನೀಡಲಾಗುವುದು. ನಂತರ ಪುಟಿನ್ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿಯ ಸಮಾಧಿಗೆ ಪುಷ್ಪಾರ್ಪಣೆ ಮಾಡಲಿದ್ದಾರೆ.
ಹೈದ್ರಾಬಾದ್ ಹೌಸ್ ಮತ್ತು ಭಾರತ ಮಂಟಪದಲ್ಲಿ ಮೋದಿ-ಪುಟಿನ್ ಮಾತುಕತೆ ನಡೆಸಲಿದ್ದಾರೆ. ರಕ್ಷಣೆ, ಶಕ್ತಿ, ವ್ಯಾಪಾರ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ ಸಹಿ ಬೀಳುವ ನಿರೀಕ್ಷೆ ಇದೆ.
ವಿಶೇಷವಾಗಿ ಈ ಬಾರಿ ಚರ್ಚೆಯಾಗುವ ಸಾಧ್ಯತೆ ಇರುವ ವಿಷಯಗಳು
- ಉಳಿದ ಮೂರು ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ತ್ವರಿತ ಸರಬರಾಜು
- ಸಣ್ಣ ಮತ್ತು ಮಧ್ಯಮ ಪ್ರಮಾಣದ ಪರಮಾಣು ವಿದ್ಯುತ್ ಘಟಕಗಳ ಸ್ಥಾಪನೆ
- ಅತ್ಯಾಧುನಿಕ ಸುಖೋಯ್-57 ಯುದ್ಧ ವಿಮಾನಗಳ ಖರೀದಿ/ಉತ್ಪಾದನೆ
- ರಷ್ಯಾದಿಂದ ಭಾರತಕ್ಕೆ ಗರಿಷ್ಠ ಪ್ರಮಾಣದ ಕಚ್ಚಾ ತೈಲ ಸರಬರಾಜು ಮುಂದುವರಿಕೆ
- ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ ಮುಕ್ತ ವಾಣಿಜ್ಯ ಒಪ್ಪಂದ (FTA)
- ಉತ್ತರ-ದಕ್ಷಿಣ ಸಾಗಾಣಿಕೆ ಕಾರಿಡಾರ್ (INSTC) ವೇಗವರ್ಧನೆ
ಪುಟಿನ್ ಜೊತೆಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯಿ ಲ್ಯಾವ್ರೊವ್, ಉಪಪ್ರಧಾನಿ ದೆನಿಸ್ ಮಂತುರೊವ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮತ್ತು ವ್ಯಾಪಾರಿ ನಿಯೋಗ ಆಗಮಿಸಿದೆ. ಇದು ಒಪ್ಪಂದಗಳ ಸಂಖ್ಯೆ ಮತ್ತು ಪ್ರಮಾಣ ಎರಡೂ ದಾಖಲೆ ಮುರಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಭಾರತ–ರಷ್ಯಾ ಸಂಬಂಧಗಳು ದಶಕಗಳಿಂದಲೂ ಬಲಿಷ್ಠವಾಗಿದ್ದರೂ, ಜಾಗತಿಕ ರಾಜಕೀಯ ಬದಲಾವಣೆಗಳ ನಡುವೆ ಈ ಭೇಟಿಯು ಎರಡೂ ರಾಷ್ಟ್ರಗಳಿಗೆ ಹೊಸ ದಾರಿದೀಪವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂಧನ, ರಕ್ಷಣಾ, ಅಂತರಿಕ್ಷ ಮತ್ತು ವ್ಯಾಪಾರ ಸೇರಿದಂತೆ ಹಲವು ಕಡೆ ಸಹಕಾರ ವಿಸ್ತರಣೆ ಸಾಧ್ಯತೆ ಇದೆ.





