ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಕ್ರೇಜ್ ಸೃಷ್ಟಿಸಿದ್ದವರು ಸೀಸನ್ 11ರ ಮಾಜಿ ಸ್ಪರ್ಧಿಗಳು, ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ. ಅತಿಥಿಗಳಾಗಿ ಬಂದಿದ್ದ ಇವರು ಸ್ಪರ್ಧಿಗಳೊಂದಿಗೆ ಆಟವಾಡಿ, ನಗಿಸಿ, ಗೊಂದಲ ಮೂಡಿಸಿ ಮನರಂಜನೆ ನೀಡಿದ್ದರು. ಆದರೆ ಅವರ ಕೊನೆಯ ದಿನವಾದ ಶುಕ್ರವಾರ ಭಾವುಕತೆ ಮತ್ತು ವಿವಾದದಿಂದ ಕೂಡಿದೆ.
ಬಿಗ್ ಬಾಸ್‌ನಲ್ಲಿ ಕಣ್ಣೀರಿಟ್ಟ ಚೈತ್ರಾ
ಬೀಳ್ಕೊಡುಗೆ ಸಂದರ್ಭದಲ್ಲಿ ಎಲ್ಲ ಮಾಜಿ ಸ್ಪರ್ಧಿಗಳೂ ಬಿಗ್ ಬಾಸ್ ತಮ್ಮ ಜೀವನದಲ್ಲಿ ಆದ ಬದಲಾವಣೆಯ ಬಗ್ಗೆ ಮಾತನಾಡಿದರು. ಚೈತ್ರಾ ಕುಂದಾಪುರ ಅತ್ಯಂತ ಭಾವುಕರಾದರು. ಕಣ್ಣೀರು ಸುರಿಸುತ್ತಾ, ಬಿಗ್ ಬಾಸ್ ಯಾರಿಗೆ ಏನು ಕೊಟ್ಟಿದೆ ಎನ್ನುವುದು ನನಗೆ ಗೊತ್ತಿಲ್ಲ… ಆದರೆ ನನಗೆ ಅಂತೂ ಪುನರ್ಜನ್ಮವೇ ಕೊಟ್ಟಿದೆ! ಎಂದು ಹೇಳಿದರು. ಈ ಮಾತು ಮನೆಯಲ್ಲಿದ್ದ ಎಲ್ಲರನ್ನೂ ಭಾವುಕರನ್ನಾಗಿ ಮಾಡಿತು.
ರಜತ್ ಅವರು, ಮಾತನಾಡಿದ್ದು, ನಾವು ಸತ್ತ ಮೇಲೂ ನಮ್ಮ ವಂಶಪರಂಪರೆ ನಮ್ಮನ್ನು ನೋಡುತ್ತದೆ. ಆ ದೊಡ್ಡ ಅವಕಾಶವನ್ನು ಬಿಗ್ ಬಾಸ್ ಕೊಟ್ಟಿದೆ ಎಂದರು. ಇನ್ನು ತ್ರಿವಿಕ್ರಮ್ ಮಾತನಾಡಿದ್ದು, ಇದೊಂದು ಕರ್ಮ ಕಳೆಯುವ ಜಾಗ ಎಂದು ಹೇಳಿದರು. ಮೋಕ್ಷಿತಾ ಪೈ ಅವರು, ತಲೆ ಎತ್ತಿ ನಿಲ್ಲುವ ಆತ್ಮವಿಶ್ವಾಸ ಕೊಟ್ಟಿದ್ದು ಬಿಗ್ ಬಾಸ್ ಎಂದರು. ಉಗ್ರಂ ಮಂಜು ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಬಿಗ್ ಬಾಸ್ ಪ್ಯಾಲೇಸ್ ಟಾಸ್ಕ್: ಸೇವಕರಾದ ಸ್ಪರ್ಧಿಗಳು
ಈ ವಾರದ ಮುಖ್ಯ ಟಾಸ್ಕ್ ‘ಬಿಗ್ ಬಾಸ್ ಪ್ಯಾಲೇಸ್’. ಮನೆಯನ್ನು ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸಲಾಗಿತ್ತು. ಕ್ಯಾಪ್ಟನ್ ಅಭಿ ಮ್ಯಾನೇಜರ್, ಗಿಲ್ಲಿ ಕೌಶಿಕ್ ಸರ್ವರ್ (ವೇಟರ್) ಸೇರಿದಂತೆ ಎಲ್ಲ ಸ್ಪರ್ಧಿಗಳೂ ಹೋಟೆಲ್ ಸಿಬ್ಬಂದಿಯಾದರು. ಮಾಜಿ ಸ್ಪರ್ಧಿಗಳೇ ಅತಿಥಿಗಳು.
ಗಿಲ್ಲಿ ಮೇಲೆ ಟಾರ್ಗೆಟ್ – ವೀಕ್ಷಕರ ಆಕ್ರೋಶ
ಈ ಟಾಸ್ಕ್ ಸಂದರ್ಭದಲ್ಲಿ ಮಾಜಿ ಸ್ಪರ್ಧಿಗಳ ವರ್ತನೆ ವಿವಾದಕ್ಕೆ ಗುರಿಯಾಯಿತು. ಗಿಲ್ಲಿ ಕೌಶಿಕ್ ಅವರನ್ನು ಗುರಿಯಾಗಿಸಿಕೊಂಡು ಉಗ್ರಂ ಮಂಜು, ರಜತ್ ಮತ್ತು ಇತರರು ತೀವ್ರ ಟೀಕೆ ಮಾಡಿದರು. ಉಗ್ರಂ ಮಂಜು ತಮ್ಮ ಮದುವೆಯ ಬ್ಯಾಚುಲರ್ ಪಾರ್ಟಿ ಮಾಡಲು ಬಂದಿರುವುದಾಗಿ ಮೋಕ್ಷಿತಾ ತಮಾಷೆಯಾಗಿ ಹೇಳಿದಾಗ, ಗಿಲ್ಲಿ “ಎರಡನೇ ಮದುವೆಯಾ? ಮೂರನೇದ್ದಾ?” ಎಂದು ಕೇಳಿದ್ದಕ್ಕೆ ಉಗ್ರಂ ಮಂಜು ಸೀದಾ ಕೋಪಕ್ಕೆ ಒಳಗಾದರು.
ನಂತರ ಬೆಡ್‌ರೂಮ್‌ನಲ್ಲಿ ಐವರೂ ಮಾಜಿ ಸ್ಪರ್ಧಿಗಳು ಒಟ್ಟಾಗಿ ಕುಳಿತು ಗಿಲ್ಲಿಯನ್ನು ಮುಂದೆ ಕೂರಿಸಿಕೊಂಡು “ಕ್ಲಾಸ್” ತೆಗೆದುಕೊಂಡ ದೃಶ್ಯ ಟೀವಿಯಲ್ಲಿ ಪ್ರಸಾರವಾದಾಗ ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಅತಿಥಿಗಳಾಗಿ ಬಂದವರು ಮನೆಯ ಸ್ಪರ್ಧಿಯೊಬ್ಬನನ್ನು ಇಷ್ಟು ಟಾರ್ಗೆಟ್ ಮಾಡುವುದು ಸರಿಯೇ?” “ಗಿಲ್ಲಿ ಟಾಸ್ಕ್‌ನಲ್ಲಿ ವೇಟರ್ ಆಗಿ ತಮಾಷೆ ಮಾಡುತ್ತಿದ್ದ, ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಬೈದಿದ್ದು ತಪ್ಪು” ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದವು.
ವಿವಾದಗಳ ನಡುವೆಯೂ ಮಾಜಿ ಸ್ಪರ್ಧಿಗಳ ಬೀಳ್ಕೊಡುಗೆ ದೃಶ್ಯ ಎಲ್ಲರ ಹೃದಯಕ್ಕೆ ಮುಟ್ಟಿತು. ಚೈತ್ರಾ ಕುಂದಾಪುರ ಅವರ ಕಣ್ಣೀರು, ಉಗ್ರಂ ಮಂಜು ಅವರ ತಮಾಷೆಯ ಮಾತುಗಳು, ರಜತ್ ಅವರ ಗಂಭೀರ ಚಿಂತನೆ ಎಲ್ಲವೂ ಮನೆಯ ವಾತಾವರಣವನ್ನು ಭಾವುಕರನ್ನಾಗಿ ಮಾಡಿತ್ತು..





