ಉಡುಪಿ, ನವೆಂಬರ್ 28, 2025: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿಯಾಗಿ ಮೊದಲ ಬಾರಿಗೆ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ ಮೋದಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆದಿಮರಳು ಸ್ವಾಮೀಜಿ ಸೇರಿದಂತೆ ಎಲ್ಲ ಅಷ್ಟ ಮಠಾಧೀಶರು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇತರರು ಪ್ರಧಾನಿಗೆ ಭಾವಪೂರ್ಣ ಸ್ವಾಗತ ಕೋರಿದರು.
ಪ್ರಧಾನಿ ಮೋದಿ ಮೊದಲು ಪವಿತ್ಮಾನವಾದ ಮಧ್ವ ಸರೋವರಕ್ಕೆ ತೆರಳಿ ತೀರ್ಥ ಸ್ವೀಕಾರ ಮಾಡಿಕೊಂಡರು. ನಂತರ ಸ್ವರ್ಣಲೇಪಿತ ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀ ಕೃಷ್ಣ ದೇವರ ದರ್ಶನ ಪಡೆದರು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸಿದ್ದರು. ಮೋದಿ ಅವರು ಕೃಷ್ಣನ ಮುಂದೆ ಕೈಮುಗಿದು ಮಂತ್ರಮುಗ್ದರಾಗಿದ್ದಾರೆ.
₹2 ಕೋಟಿ ವೆಚ್ಚದ ಸ್ವರ್ಣ ತೀರ್ಥ ಮಂಟಪ ಉದ್ಘಾಟನೆ
ಪೇಜಾವರ ಶ್ರೀಗಳ ಸನ್ಯಾಸ ದೀಕ್ಷೆಯ ಸುವರ್ಣ ಮಹೋತ್ಸವದ ಅಂಗವಾಗಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಸ್ವರ್ಣಲೇಪಿತ ತೀರ್ಥ ಮಂಟಪಕ್ಕೆ ಪ್ರಧಾನಿ ಮೋದಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಈ ಅದ್ಭುತ ಕಟ್ಟಡವು ಇನ್ನು ಮುಂದೆ ಭಕ್ತರಿಗೆ ತೀರ್ಥ ಸ್ವೀಕಾರಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸಲಿದೆ. ಉದ್ಘಾಟನಾ ಸಮಾರಂಭದಲ್ಲಿ ಎಲ್ಲ ಅಷ್ಟ ಮಠಾಧೀಶರು, ರಾಜಕೀಯ ಗಣ್ಯರು ಉಪಸ್ಥಿತರಿದ್ದರು.
ಶ್ರೀ ಕೃಷ್ಣ ದರ್ಶನದ ಬಳಿಕ ಪ್ರಧಾನಿ ಮೋದಿ ಮಠದೊಳಗೆ ಮುಖ್ಯಪ್ರಾಣ ದೇವರ (ಹನುಮಂತ ದೇವರ) ಮತ್ತು ಗರುಡ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿಗಳು ಪ್ರಧಾನಿಗೆ ಶಾಲು, ಫಲ-ಪುಷ್ಪ, ಮತ್ತು ಶ್ರೀ ಕೃಷ್ಣ ವಿಗ್ರಹದ ಪ್ರತಿಕೃತಿ ನೀಡಿ ಆಶೀರ್ವದಿಸಿದರು.
17 ವರ್ಷಗಳ ಬಳಿಕ ಮತ್ತೊಮ್ಮೆ ಕೃಷ್ಣ ಮಠಕ್ಕೆ ಮೋದಿ ಭೇಟಿ
2008ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಆಗಲೂ ಅವರು ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನ ಪಡೆದಿದ್ದರು. ಇಂದು 17 ವರ್ಷಗಳ ಬಳಿಕ ಪ್ರಧಾನಿಯಾಗಿ ಮತ್ತೊಮ್ಮೆ ಅದೇ ಭಾಗ್ಯ ಅವರಿಗೆ ದೊರೆತಿದೆ. ಈ ಬಾರಿ ಸ್ವರ್ಣಲೇಪಿತ ಕನಕನ ಕಿಂಡಿಯ ಮೂಲಕ ದರ್ಶನ ಪಡೆದಿದ್ದು ವಿಶೇಷವಾಗಿದೆ.





