ಭಾರತದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಆತ್ಮಾಹುತಿ ದಾಳಿಗಳನ್ನು ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ (JeM) ರಾಕ್ಷಸೀಯ ಸಂಚು ರೂಪಿಸಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಭಯಾನಕ ಯೋಜನೆಗಾಗಿ ಸಂಘಟನೆಯು ಈಗಾಗಲೇ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸುತ್ತಿದೆ ಎಂದು ಹೇಳಲಾಗಿದೆ.
ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಣೆ
ಜೈಷ್ ಸಂಘಟನೆ ‘ದೇಣಿಗೆ’ ಎಂಬ ಹೆಸರಿನಲ್ಲಿ ಪಾಕಿಸ್ತಾನದಲ್ಲಿ ಭಾರಿ ಪ್ರಮಾಣದಲ್ಲಿ ಹಣ ಸಂಗ್ರಹಿಸುತ್ತಿದ್ದು, ಪ್ರತಿ ವ್ಯಕ್ತಿಯಿಂದ 20,000 ಪಾಕಿಸ್ತಾನ ರೂ. (ಭಾರತೀ ಮೌಲ್ಯದಲ್ಲಿ ಸುಮಾರು ₹6,400) ಪಡೆಯಲಾಗುತ್ತಿದೆ. ಈ ಹಣವನ್ನು ಭಾರತದಲ್ಲಿನ ಚಳಿಗಾಲದ ತಿಂಗಳುಗಳಲ್ಲಿ ಕಾಶ್ಮೀರ ಮಾರ್ಗದ ಮೂಲಕ ಉಗ್ರರನ್ನು ನುಸುಳಿಸಲು ಅಗತ್ಯವಾದ ಚಳಿಗಾಲದ ಕಿಟ್ ಹಾಗೂ ಸ್ಫೋಟಕ ವಸ್ತುಗಳ ತಯಾರಿಕಾ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಉಗ್ರರ ಚಳಿಗಾಲ ನುಸುಳಿಕೆಗಾಗಿ ಸಿದ್ಧತೆ
ಉಗ್ರರು ಗಡಿ ದಾಟುವಾಗ ಎದುರಿಸುವ ಶೀತ, ತೀವ್ರವಾಗಿರುವುದರಿಂದ ಅವರಿಗೆ ಶೀತನಿರೋಧಕ ವಿಂಟರ್ ಕಿಟ್, ದಪ್ಪ ಉಡುಪು, ವಿಶೇಷ ಶೂ, ಶೀತ ನಿರೋಧಕ ಹೊದಿಕೆ, ಬ್ಯಾಗ್, ಕೈಗವಸು, ಜೊತೆಗೆ ಗುಪ್ತವಾಗಿ ತಂಗಿ ಚಲಿಸಲು ಅಗತ್ಯವಾದ ಟೆಂಟ್ ಖರೀದಿಸಲು ಈ ಹಣವನ್ನು ಬಳಕೆ ಮಾಡಲಾಗುತ್ತಿದೆ.
ಬಾಂಬ್–ಐಇಡಿ ತಯಾರಿ ಚಟುವಟಿಕೆಗಳಿಗೆ ಹಣ ಬಳಕೆ
ದೇಣಿಗೆಯ ಮೂಲಕ ಸಂಗ್ರಹವಾಗುತ್ತಿರುವ ಹಣವನ್ನು ಸ್ಫೋಟಕ ವಸ್ತುಗಳು, ಐಇಡಿ ತಯಾರಿ ಸಾಮಗ್ರಿ, ಸಂವಹನ ಉಪಕರಣಗಳು ಮತ್ತು ನುಸುಳಿಕೆಗೆ ಅಗತ್ಯವಾದ ಸಹಾಯಕ ಸಾಮಗ್ರಿಗಳ ಖರೀದಿಗೂ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ನಡೆದ ದೆಹಲಿಯ ಕೆಂಪುಕೋಟೆ ಕಾರ್ ಬಾಂಬ್ ಸ್ಫೋಟ ಘಟನೆಯಲ್ಲಿ, ಜೈಷ್ –ಎ –ಮೊಹಮ್ಮದ್ ಪಾತ್ರ ಇದೆ ಎಂದು ಶಂಕೆ ವ್ಯಕ್ತವಾಗಿದೆ.
ಡಿಜಿಟಲ್ ಮೂಲಕವೂ ಹಣ ಸಂಗ್ರಹಣೆಗೆ ಪ್ಲಾನ್
ಹೊಸದಾಗಿ, ಜೈಷ್ ಸಂಘಟನೆಯು ಪಾಕಿಸ್ತಾನದಲ್ಲಿ ಉಪಯೋಗಿಸಲಾಗುವ ‘SadaPay’ (‘ಸದಾ ಪೇ’) ಎಂಬ ಆಂಡ್ರಾಯ್ಡ್ ಆಪ್ ಮೂಲಕವೂ ಡಿಜಿಟಲ್ ದೇಣಿಗೆ ಸಂಗ್ರಹಿಸುತ್ತಿರುವುದು ಬೆಳಕಿಗೆ ಬಂದಿದೆ. ಆನ್‌ಲೈನ್ ಬ್ಯಾಂಕಿಂಗ್, ಇ-ವಾಲೆಟ್, ಟೋಕನ್ ಪೇಮೆಂಟ್ ಸೇವೆಗಳ ಮೂಲಕ ಹಣ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ. ಭಾರತದಲ್ಲೂ ದೇಣಿಗೆ ಸಂಗ್ರಹಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಮಹಿಳೆಯರನ್ನು ಬಳಸುವ ಹೊಸ ತಂತ್ರ
ಜೈಷ್ ನಾಯಕ ಮಸೂದ್ ಅಜರ್ ಅವರ ಸಹೋದರಿ ಸಯೀದಾ ಅಜರ್ ಮಹಿಳೆಯರನ್ನು ಬಳಸಿ ಆತ್ಮಾಹುತಿ ದಾಳಿಗಳನ್ನು ನಡೆಸುವ ಯೋಜನೆ ರೂಪಿಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಸಹ ಬಂದಿದೆ. ಮಹಿಳಾ ಫಿದಾಯೀನ್ (Female Suicide Squad) ಬಳಸಿ ಭದ್ರತಾ ವ್ಯವಸ್ಥೆಯನ್ನು ತಪ್ಪಿಸಲು ಜೈಷ್ ಹೊಸ ವಿಧಾನಕ್ಕೆ ಮುಂದಾಗಿದೆ ಎಂದು ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ.





