ಕನ್ನಡದ ಮನೆಮಾತಾಗಿರುವ ಕಲರ್ಸ್ ಕನ್ನಡ ವಾಹಿನಿಯ ಮೆಗಾ ಧಾರಾವಾಹಿ ಭಾಗ್ಯಲಕ್ಮೀ ಈಗಾಗಲೇ ಪ್ರೇಕ್ಷಕರ ಹೃದಯದಲ್ಲಿ ಗಟ್ಟಿ ಸ್ಥಾನ ಪಡೆದಿದೆ. ಆದಿ ಮತ್ತು ಲಕ್ಷ್ಮೀ ನಡುವಿನ ಸ್ನೇಹ, ಕುಟುಂಬದ ಸಂಘರ್ಷಗಳು, ಒಡನಾಟಗಳು ಪ್ರತಿ ಸಂಜೆ 7 ಗಂಟೆಗೆ ಲಕ್ಷಾಂತರ ಕನ್ನಡಿಗರನ್ನು ತೆರೆಯ ಮುಂದೆ ಕೂರಿಸುತ್ತಿವೆ. ಇದೀಗ ಈ ಧಾರಾವಾಹಿಗೆ ಒಂದು ತಿರುವು ಬರುತ್ತಿದೆ. ಹೆಸರಾಂತ ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಬರುವ ಎಪಿಸೋಡ್‌ಗಳಲ್ಲಿ ಆದಿಯ ಕುಟುಂಬ ಆತನ ಮೇಲೆ ಮದುವೆಯ ಒತ್ತಡ ಹೇರಲಿದೆ. ನೀನು ಈಗ ಮದುವೆಯಾಗಬೇಕು, ಕಾಲ ಮಿತಿ ಮೀರಿದೆ ಎಂಬ ಒತ್ತಾಯಕ್ಕೆ ಮಣಿಯದ ಆದಿ, ಕುಟುಂಬದವರ ಜೊತೆ ಹುಡುಗಿ ನೋಡಲು ಹೋಗುತ್ತಾನೆ. ಆ ಹುಡುಗಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವವಳು ಬೇರೆ ಯಾರೂ ಅಲ್ಲ, ನಟಿ ಮೇಘಾಶ್ರೀ.
ಮೇಘಾಶ್ರೀ ಅವರ ಪ್ರವೇಶ ಕೇವಲ ಒಂದೆರಡು ಎಪಿಸೋಡ್‌ಗಳಿಗೆ ಸೀಮಿತವಲ್ಲ ಎಂದು ತಿಳಿದುಬಂದಿದೆ. ಆದಿಯ ಜೀವನದಲ್ಲಿ ಇವರ ಪಾತ್ರ ಮಹತ್ವದ ತಿರುವು ತಂದೊಡ್ಡಬಹುದು ಎಂಬ ಸುದ್ದಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದಿ-ಲಕ್ಷ್ಮೀ ಜೋಡಿಯ ಸ್ನೇಹಕ್ಕೆ ಇದು ದೊಡ್ಡ ಸವಾಲಾಗಬಹುದೇ ? ಲಕ್ಷ್ಮೀಗೆ ಈ ಘಟನೆ ತಿಳಿದರೆ ಆಕೆಯ ಪ್ರತಿಕ್ರಿಯೆ ಹೇಗಿರುತ್ತದೆ ? ಆದಿಯ ಮನಸ್ಸು ಎತ್ತ ಕೊಂಡೊಯ್ಯುತ್ತದೆ ? ಈ ಪ್ರಶ್ನೆಗಳೇ ಈಗ ಪ್ರೇಕ್ಷಕರನ್ನು ಕಾಡುತ್ತಿವೆ.
ಮೇಘಾಶ್ರೀ ಅವರು ಕನ್ನಡ ಚಿತ್ರರಂಗ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ. ‘ಗಿಚ್ಚ್ ಗಿಲಿಗಿಲಿ’, ‘ನಾಗಿಣಿ’, ‘ಜೋಡಿ ಹಾಕ್ಕಿ’ ನಂತರ ಇದೀಗ ಭಾಗ್ಯಲಕ್ಮೀಗೆ ಅವರ ಎಂಟ್ರಿ ಪ್ರೇಕ್ಷಕರಿಗೆ ಹೊಸ ಆಸಕ್ತಿ ತಂದಿದೆ. ಅವರ ಗ್ಲಾಮರ್, ಅಭಿನಯದ ಲಾಲಿತ್ಯ, ಡೈಲಾಗ್ ಡೆಲಿವರಿ ಈ ಧಾರಾವಾಹಿಗೆ ಹೆಚ್ಚುವರಿ ಬಲ ನೀಡಲಿದೆ ಎಂಬುದು ನಿರ್ಮಾಪಕರ ಭರವಸೆ.
ಈಗಾಗಲೇ ಪ್ರೊಮೋ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿವೆ. “ಆದಿ ಮದುವೆಯಾಗ್ತಾನಾ ?”, “ಲಕ್ಷ್ಮೀಗೆ ಶಾಕ್ ಆಗುತ್ತಾ?”, “ಮೇಘಾಶ್ರೀ ಪಾತ್ರ ಎಷ್ಟು ದಿನ ಇರುತ್ತೆ?” ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿಬರುತ್ತಿವೆ. ಕಲರ್ಸ್ ಕನ್ನಡ ವಾಹಿನಿಯ ಅಧಿಕೃತ ಇನ್‌ಸ್ಟಾಗ್ರಾಂ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರೊಮೋಗಳು ಲಕ್ಷಾಂತರ ವ್ಯೂಸ್ ಪಡೆಯುತ್ತಿವೆ.
ಪ್ರತಿ ದಿನ ಸಂಜೆ 7:00 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಮೀ ಈಗ ಹೊಸ ರೋಚಕತೆಯ ಕಾಲಘಟ್ಟಕ್ಕೆ ಕಾಲಿಡುತ್ತಿದೆ. ಮೇಘಾಶ್ರೀ ಅವರ ಪಾತ್ರ ಆದಿಯ ಜೀವನದಲ್ಲಿ ಎಂತಹ ಬದಲಾವಣೆ ತರುತ್ತದೆ ? ಇದು ಲಕ್ಷ್ಮೀ-ಆದಿ ಸಂಬಂಧಕ್ಕೆ ಧಕ್ಕೆ ತರುತ್ತದೆಯೇ ? ಎಲ್ಲ ಪ್ರಶ್ನೆಗಳಿಗೆ ಉತ್ತರ ಧಾರಾವಾಹಿಯಲ್ಲೇ ಇದೆ!





