ಬಿಹಾರ ವಿಧಾನಸಭಾ ಚುನಾವಣೆ 2025ರ ಫಲಿತಾಂಶಗಳು ಇಂದು ಹೊರಬೀಳುತ್ತಿದ್ದು, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟ (NDA) ಭರ್ಜರಿ ಮುನ್ನಡೆ ಸಾಧಿಸಿ ಅಧಿಕಾರದತ್ತ ಸಾಗುತ್ತಿದೆ. 243 ಕ್ಷೇತ್ರಗಳಲ್ಲಿ NDA 195ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎದುರಾಳಿ ಮಹಾಘಟಬಂಧನ್ ಕೇವಲ 45 ಕ್ಷೇತ್ರಗಳಲ್ಲಿ ಮಾತ್ರ ಮುಂದಿದೆ. ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಈ ಫಲಿತಾಂಶಗಳು ಚುನಾವಣೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭವಿಷ್ಯವನ್ನು ನಿಜಗೊಳಿಸುತ್ತಿದೆ.
ಚುನಾವಣಾ ಪ್ರಚಾರದ ಸಮಯದಲ್ಲಿ ಸುದ್ದಿವಾಹಿನಿಯ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ್ದ ಅಮಿತ್ ಶಾ, NDA ಈ ಬಾರಿ 160+ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮೂರರಲ್ಲಿ ಎರಡು ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಘೋಷಿಸಿದ್ದರು. ಆದರೆ ಈಗಾಗಲೇ NDA 190+ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಶಾ ಅವರ ‘ಚಾಣಕ್ಯ’ ತಂತ್ರಗಳು ಮತ್ತೊಮ್ಮೆ ಯಶಸ್ವಿಯಾಗಿವೆ ಎಂದು ತೋರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರಭಾವವೇ ಈ ಗೆಲುವಿನ ಮೂಲಕಾರಣ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ , ಬಿಹಾರ ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ಜನರು ಕೊಟ್ಟ ತೀರ್ಪನ್ನು ಒಪ್ಪಿಕೊಳ್ಳಬೇಕು. ಯಾಕೆ ಹಿನ್ನಡೆ ಆಯ್ತು, ಯಾರು ವೋಟ್ ಹಾಕಲಿಲ್ಲ ಅಂತ ಗೊತ್ತಿಲ್ಲ. NDA ಯಾಕೆ ಇಷ್ಟೊಂದು ದೊಡ್ಡ ಬಹುಮತ ಪಡೆಯುತ್ತಿದೆ ಎಂಬುದೂ ತಿಳಿದಿಲ್ಲ. ಸಂಪೂರ್ಣ ಮಾಹಿತಿ ಪಡೆದು ನಂತರ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್‌ಗೆ ಈ ಸೋಲು ದೊಡ್ಡ ಆಘಾತವಾಗಿದ್ದು, ಒಕ್ಕೂಟದ ಒಗ್ಗಟ್ಟಿನ ಕೊರತೆ ಮತ್ತು ಪ್ರಚಾರದಲ್ಲಿ ತಪ್ಪುಗಳೇ ಕಾರಣ ಎಂದು ಆಂತರಿಕ ಚರ್ಚೆಗಳು ನಡೆಯುತ್ತಿವೆ.
ಬಿಜೆಪಿ ಸಂಸದ ಮನನ್ ಮಿಶ್ರಾ ಅವರು ಈ ಗೆಲುವನ್ನು ಮೋದಿ-ನಿತೀಶ್ ಜೋಡಿಯೇ ಕಾರಣ ಎಂದು ಖುಷಿ ಪಟ್ಟಿದ್ದಾರೆ. NDA ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಇಲ್ಲಿ ಯಾವುದೇ ಬೆದರಿಕೆಗಳು ಕೆಲಸ ಮಾಡುವುದಿಲ್ಲ. ಇಂಡಿ ಒಕ್ಕೂಟದವರು ಈಗ ಮನೆಯಲ್ಲೇ ಅಡಗಿಕೊಂಡಿದ್ದಾರೆ ಎಂದು ಮನನ್ ಮಿಶ್ರಾ ವಾಗ್ದಾಳಿ ನಡೆಸಿದರು. ಇನ್ನೊಂದೆಡೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಾಮಾತನಾಡಿ, ಬಿಹಾರ ಗೆದ್ದಾಯ್ತು, ಮುಂದೆ ಬಂಗಾಳ ಬಿಹಾರದ ಯುವಕರು ಬುದ್ಧಿವಂತರು. ಇದು ಅಭಿವೃದ್ಧಿಯ ಗೆಲುವು. NDA ಅಧಿಕಾರ ಸ್ಥಾಪಿಸಲಿದೆ ಎಂದು ಹೇಳಿದ್ದಾರೆ.
ತಾಜಾ ಮತ ಎಣಿಕೆಯಲ್ಲಿ 191 ಕ್ಷೇತ್ರಗಳಲ್ಲಿ NDA ಮುನ್ನಡೆಯಲ್ಲಿದ್ದು, ಮಹಾಘಟಬಂಧನ್ 48 ಮತ್ತು ಇತರರು 4 ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಶೂನ್ಯಕ್ಕೆ ಕುಸಿದಿದೆ. ಆದರೆ ಮಹಾಘಟಬಂಧನ್‌ನ ನಾಯಕ ತೇಜಸ್ವಿ ಯಾದವ್ ಅವರು ರಾಘೋಪುರ ಕ್ಷೇತ್ರದಲ್ಲಿ 893 ಮತಗಳ ಮುನ್ನಡೆ ಸಾಧಿಸಿ ಕನಿಷ್ಠ ಆಸರೆ ಕಂಡುಕೊಂಡಿದ್ದಾರೆ.





