ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಷೆಯೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಉಡುಪಿ ಮೂಲದ ನಟಿ ರಕ್ಷಿತಾ ಶೆಟ್ಟಿ ಅವರ ಕನ್ನಡ ಉಚ್ಚಾರಣೆಯನ್ನು ಧ್ರುವಂತ್ ಟೀಕಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದರಿಂದ ಕನ್ನಡ ಸ್ವಲ್ಪ ಕಷ್ಟವಾಗುತ್ತಿದೆ ಎಂದು ರಕ್ಷಿತಾ ಈಗಾಗಲೇ ಹೇಳಿಕೊಂಡಿದ್ದಾರೆ. ಆದರೂ ಅವರು ಪ್ರಾಮಾಣಿಕವಾಗಿ ಕನ್ನಡದಲ್ಲೇ ಮಾತನಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಧ್ರುವಂತ್ ಇದನ್ನೇ ಗೇಲಿ ಮಾಡಿದ್ದಾರೆ.
ರಕ್ಷಿತಾ ಶೆಟ್ಟಿ ಉಡುಪಿ ಜಿಲ್ಲೆಯವರು. ಆದರೆ ಬಾಲ್ಯದಿಂದಲೂ ಮುಂಬೈನಲ್ಲಿ ಬೆಳೆದಿದ್ದಾರೆ. ಹೀಗಾಗಿ ಕನ್ನಡ ಭಾಷೆಯಲ್ಲಿ ಸಂಪೂರ್ಣ ಪರಿಣತಿ ಬಂದಿಲ್ಲ. ಆದರೂ ಅವರು ಯಾವಾಗ್ಲೂ ಕನ್ನಡದಲ್ಲೇ ಮಾತನಾಡಲು ಯತ್ನಿಸುತ್ತಾರೆ. ಉತ್ಸಾಹ, ಟೆನ್ಷನ್ ಅಥವಾ ಭಾವುಕ ಸಂದರ್ಭಗಳಲ್ಲಿ ಶಬ್ದಗಳು ತಡವರಿಸುತ್ತಾರೆ, ಹಾಗೆಯೇ ತೊದಲುತ್ತಾರೆ. ಆದರೆ ಧ್ರುವಂತ್ ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು “ನಾನು ಮಂಗಳೂರಿನವನು, ಆದರೆ ಮಂಗಳೂರಿನಲ್ಲಿ ಯಾರೂ ರಕ್ಷಿತಾ ರೀತಿ ಮಾತನಾಡುವುದಿಲ್ಲ” ಎಂದು ಗೇಲಿ ಮಾಡಿದ್ದಾರೆ. ರಕ್ಷಿತಾ ಹೇಳುವ “ಎಂತ ಗೊತ್ತುಂಟ ಗಯ್ಸ್” ಎಂಬ ಮಾತನ್ನೂ ಅವರು ತರ್ಲೆ ವಿಷಯವಾಗಿಸಿ ಗೇಲಿ ಮಾಡಿದ್ದಾರೆ.
ಇದು ಕೇವಲ ಭಾಷಾ ಟೀಕೆಯಲ್ಲ, ಮಂಗಳೂರು-ಉಡುಪಿ ಪ್ರದೇಶದ ಜನರ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ. ರಕ್ಷಿತಾ ಮಂಗಳೂರು ತಾಲೂಕಿನ ಹಿಂದೂ ಕುಟುಂಬದವರು. ಅವರ ತಂದೆ-ತಾಯಿ ಕನ್ನಡಿಗರೇ. ಆದರೆ ಮುಂಬೈನಲ್ಲಿ ವಾಸವಿದ್ದ ಕಾರಣ ಮಗಳಿಗೆ ಕನ್ನಡ ಸಂಪೂರ್ಣ ಬಂದಿಲ್ಲ. ಇದನ್ನು ತಪ್ಪು ಎಂದು ಪರಿಗಣಿಸುವುದಕ್ಕಿಂತ, ಅವರ ಪ್ರಯತ್ನವನ್ನು ಮೆಚ್ಚಬೇಕಿತ್ತು ಎಂಬುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಕಿರುತೆರೆಯಲ್ಲಿ ನಟಿಸಿ, ನಟಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪ ಎದುರಿಸಿ, ಬಿಗ್ ಬಾಸ್‌ಗೆ ಬಂದವರು ಧ್ರುವಂತ್. ಮೊದಲು ರಕ್ಷಿತಾ ಜೊತೆ ಸ್ನೇಹದಂತೆ ಕಾಣುತ್ತಿದ್ದ ಅವರು, ನಂತರ ತಿರುಗಿಬಿದ್ದರು. “ಅಶ್ವಿನಿ ವಿರುದ್ಧ ಮಾತನಾಡುವ ರಕ್ಷಿತಾ, ಸುದೀಪ್ ಸಮ್ಮುಖದಲ್ಲಿ ಸೈಲೆಂಟ್ ಆಗಿ ಬಿಡುತ್ತಾರೆ” ಎಂದು ಆರೋಪ ಮಾಡಿದರು. ಇದು ಆಟದ ತಂತ್ರವೋ ಅಥವಾ ವೈಯಕ್ತಿಕ ದ್ವೇಷವೋ ಎಂದು ಪ್ರೇಕ್ಷಕರು ಪ್ರಶ್ನಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ #SupportRakshitShetty ಟ್ರೆಂಡ್ ಆಗಿದೆ. ಮಂಗಳೂರು, ಉಡುಪಿ, ಬೆಂಗಳೂರು, ಮೈಸೂರು ಎಲ್ಲೆಡೆಯ ಕನ್ನಡಿಗರು ರಕ್ಷಿತಾ ಪರ ನಿಂತಿದ್ದಾರೆ. “ಕನ್ನಡ ಕಲಿಯುತ್ತಿರುವವರನ್ನು ಗೇಲಿ ಮಾಡುವುದು ಒಳ್ಳೆಯತನವಲ್ಲ”, “ಧ್ರುವಂತ್ ತಾನೇ ಮೊದಲು ತನ್ನ ನಡವಳಿಕೆ ಸರಿಪಡಿಸಲಿ” ಎಂದು ಟ್ರೋಲ್ ಆಗ್ತಿದೆ. ರಕ್ಷಿತಾ ಅವರ “ಎಂತ ಗೊತ್ತುಂಟ ಗಯ್ಸ್” ಈಗ ಮೀಮ್‌ಗಳಲ್ಲಿ ವೈರಲ್ ಆಗಿ, ಧ್ರುವಂತ್‌ಗೆ ತಿರುಗುಬಾಣವಾಗಿದೆ.
ಇನ್ನು ಧ್ರುವಂತ್ ಮಹಿಳಾ ಸ್ಪರ್ಧಿಗಳ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ನಾನು ಯಾವ ಹುಡುಗಿಯರನ್ನೂ ಮಾತನಾಡಿಸಿಕೊಂಡು ಹೋಗುತ್ತಿಲ್ಲ, ಅವರೇ ಬಂದು ಮಾತನಾಡುತ್ತಾರೆ” ಎಂದು ಹೇಳಿ, ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.





