ಬೆಂಗಳೂರು: ಇಬ್ಬರ ಕೊಲೆ ಮತ್ತು ಒಬ್ಬ ಉದ್ಯಮಿಯ ಅಪಹರಣದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.ಆಂಧ್ರಪ್ರದೇಶ ಮೂಲದ ರವಿಪ್ರಸಾದ್ ರೆಡ್ಡಿ ಎಂಬ ವ್ಯಕ್ತಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಯ ಕಾಲಿಗೆ ಗುಂಡು ಬಿದ್ದು ಆತ ಗಾಯಗೊಂಡಿದ್ದು, ಬಂಧನದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೊಮ್ಮಸಂದ್ರ ಸ್ಮಶಾನದ ಬಳಿ ರಾತ್ರಿ ಸುಮಾರು 10.30ರ ಸುಮಾರಿಗೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೋಮಶೇಖರ್ ಅವರು ಆರೋಪಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಬಳಿಕ ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಿದ್ದ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಹೆಡ್ ಕಾನ್ಸ್‌ಟೇಬಲ್ ಅಶೋಕ್ ಮೇಲೆ ಆತ ಚಾಕುವಿನಿಂದ ದಾಳಿ ಮಾಡಲು ಪ್ರಯತ್ನಿಸಿದಾಗ, ಪೊಲೀಸರು ಮೊದಲು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಕೊನೆಗೆ ಆರೋಪಿ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿ ಬಂಧಿಸಲಾಗಿದೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಧಿತ ರವಿಪ್ರಸಾದ್ ರೆಡ್ಡಿ ಆಂಧ್ರಪ್ರದೇಶದ ಗೊರಂಟ್ಲಾ ಹಳ್ಳಿಯ ಮೂಲದವನು. ಬೆಂಗಳೂರಿನಲ್ಲಿ ಕಾಂಪೋಸ್ಟ್ ವ್ಯಾಪಾರ ನಡೆಸಿ, ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಸುಮಾರು ಏಳು ಕೋಟಿ ರೂ. ಗಳಿಸಿದ ರವಿಪ್ರಸಾದ್ ಬಳಿಕ ಸಾಲದ ವ್ಯವಹಾರಗಳಲ್ಲಿ ಸಿಲುಕಿದ್ದ. ಕೊರೊನಾ ಸಮಯದಲ್ಲಿ ತನ್ನ ಚೀಟಿ ಗ್ರಾಹಕರಲ್ಲಿ ಹಲವರು ಸತ್ತಿದ್ದರಿಂದ ದೊಡ್ಡ ನಷ್ಟ ಅನುಭವಿಸಿದ್ದ.
ಹಣಕ್ಕಾಗಿ ಆತ, ತನ್ನ ಹಳೆಯ ಚೀಟಿ ಗ್ರಾಹಕರಾದ ಮಾದೇಶ ಮತ್ತು ಬಾಲಪ್ಪ ರೆಡ್ಡಿ ಅವರನ್ನು ಕೊಲ್ಲುವ ಪ್ಲ್ಯಾನ್ ಹಾಕಿದ್ದಾನೆ. ನವೆಂಬರ್ 4 ರಂದು ಕಿತ್ತಗಾನಹಳ್ಳಿಯ ಮನೆಯಲ್ಲಿ ಮಾದೇಶನನ್ನು ಚಾಕುವಿನಿಂದ ಕುತ್ತಿಗೆ ಸೀಳಿ ಕೊಂದಿದ್ದಾನೆ. ನಂತರ ನವೆಂಬರ್ 6ರಂದು, ಜಿಗಣಿ ರಿಂಗ್ ರೋಡ್ ಬಳಿ ಉದ್ಯಮಿ ಬಾಲಪ್ಪ ರೆಡ್ಡಿ ಯನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ ಹಣ ಸಿಗದೆ ಹೋದಾಗ, ಕುತ್ತಿಗೆ ಸೀಳಿ ಹತ್ಯೆ ಮಾಡಿ, ಶವವನ್ನು ತಮಿಳುನಾಡಿನ ಶಾಣಮಾವು ಕಾಡಿನಲ್ಲಿ ಎಸೆದಿದ್ದಾನೆ.
ಪೊಲೀಸರು ಸಿಸಿಟಿವಿ ದೃಶ್ಯ, ಮೊಬೈಲ್ ಲೊಕೇಶನ್ ಮತ್ತು ವಾಹನದ ವಿವರಗಳನ್ನು ಆಧರಿಸಿ ಆರೋಪಿ ಪತ್ತೆಹಚ್ಚಿದ್ದು, ರವಿಪ್ರಸಾದ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧಿ ಪ್ರಕರಣ ದಾಖಲಾಗಿದೆ.





