ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಅಕ್ರಮಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ ದೊಡ್ಡ ಬಾಂಬ್ ಸಿಡಿಸಿದ್ದರು.. ಬ್ರೆಜಿಲ್‌ನ ಒಬ್ಬ ಮಾಡೆಲ್ ಮಹಿಳೆಯ ಛಾಯಾಚಿತ್ರವನ್ನು ಬಳಸಿ ಹರಿಯಾಣದ ಮತದಾರರ ಪಟ್ಟಿಯಲ್ಲಿ 22 ಬಾರಿ ನೋಂದಣಿ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಆರೋಪಕ್ಕೆ ಇದೀಗ ಬ್ರೆಜಿಲ್ ಮಾಡೆಲ್ ಲಾರಿಸ್ಸಾ ತಮಾಷೆಯ ರಿಯಾಕ್ಷನ್ ನೀಡಿದ್ದಾರೆ.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಗಂಭೀರವಾಗಿ ಮಾತನಾಡಿದರು. “ಹರಿಯಾಣದಲ್ಲಿ ಸುಮಾರು 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ. ಇದು ದೊಡ್ಡ ಮಟ್ಟದ ಅಕ್ರಮ ಎಂದರು. ಉದಾಹರಣೆಗೆ, ಬ್ರೆಜಿಲ್‌ನ ಒಬ್ಬ ಮಾಡೆಲ್ ಮಹಿಳೆಯ ಫೋಟೋವನ್ನು ತೆಗೆದುಕೊಂಡು ಅದನ್ನು ‘ಸ್ವೀಟಿ’, ‘ಸೀಮಾ’, ‘ಸರಸ್ವತಿ’ ಮುಂತಾದ ವಿವಿಧ ಹೆಸರುಗಳಲ್ಲಿ 22 ಬಾರಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ‘ಬ್ರೆಜಿಲ್ ಮಾಡೆಲ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ” ಎಂದು ಆರೋಪಿಸಿದರು. ಈ ಹೇಳಿಕೆ ನೀಡಿದ ಅವರು ಕೆಲವು ದಾಖಲೆಗಳನ್ನು ತೋರಿಸಿ, ಚುನಾವಣಾ ಆಯೋಗದ ವಿರುದ್ಧ ತೀವ್ರ ಟೀಕೆ ಮಾಡಿದರು.
ಆದರೆ ಈ ಆರೋಪಕ್ಕೆ ಬ್ರೆಜಿಲ್‌ನ ಮಾಡೆಲ್ ಲಾರಿಸ್ಸಾ ಅವರು X (ಹಿಂದಿನ ಟ್ವಿಟರ್) ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ಹಂಚಿಕೊಂಡು ಪ್ರತಿಕ್ರಿಯಿಸಿದ್ದಾರೆ. ಪೋರ್ಚುಗೀಸ್ ಭಾಷೆಯಲ್ಲಿ ಮಾತನಾಡುತ್ತಾ ಅವರು ತಮಾಷೆಯ ರೀತಿಯಲ್ಲಿ ಹೇಳಿದ್ದಾರೆ. “ಗೈಸ್, ನಾನು ನಿಮಗೆ ಒಂದು ಜೋಕ್ ಹೇಳುತ್ತೇನೆ. ಇದು ತುಂಬಾ ವಿಚಿತ್ರವಾಗಿದೆ! ಯಾರೋ ನನ್ನ ಹಳೆಯ ಫೋಟೋವನ್ನು ಬಳಸಿಕೊಂಡು ಭಾರತದಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ! ನನ್ನ ಚಿತ್ರವನ್ನು ಇಷ್ಟೆಲ್ಲಾ ಹೆಸರಿನಲ್ಲಿ ಬಳಸಿ ಮತದಾನ ಮಾಡಲಾಗಿದೆ ಅಂತೆ? ಎಷ್ಟು ಹುಚ್ಚು ನೋಡಿ!” ಎಂದು ಅವರು ಹಾಸ್ಯ ಮಾಡಿದರು. ಈ ವೀಡಿಯೊ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಲಾರಿಸ್ಸಾ ಅವರು ತಮ್ಮ ಚಿತ್ರವನ್ನು ಭಾರತೀಯ ಚುನಾವಣಾ ಉದ್ದೇಶಕ್ಕೆ ದುರುಪಯೋಗಪಡಿಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
The name of the Brazilian Model seen in @RahulGandhi‘s press conference is Larissa. Here’s her reaction after her old photograph went viral. pic.twitter.com/K4xSibA2OP
— Mohammed Zubair (@zoo_bear) November 5, 2025
ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರೂ ಕಾಂಗ್ರೆಸ್ ಈ ಆರೋಪಗಳನ್ನು ಮುಂದುವರಿಸುತ್ತಿದೆ. ರಾಹುಲ್ ಗಾಂಧಿ ಅವರ ಹೇಳಿಕೆಯು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಯಿತು. ಆದರೆ ಬ್ರೆಜಿಲ್ ಮಾಡೆಲ್‌ನ ರಿಯಾಕ್ಷನ್ ಇಡೀ ವಿಷಯಕ್ಕೆ ಹಾಸ್ಯದ ಆಯಾಮ ನೀಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಮೀಮ್‌ಗಳು, ಜೋಕ್‌ಗಳು ಹರಿದಾಡುತ್ತಿವೆ. ಕೆಲವರು ಇದನ್ನು “ಅಂತಾರಾಷ್ಟ್ರೀಯ ಮತದಾನ ಸ್ಕ್ಯಾಂ” ಎಂದು ತಮಾಷೆ ಮಾಡುತ್ತಿದ್ದಾರೆ.





