ದೊಡ್ಡಬಳ್ಳಾಪುರ: ಶಿಕ್ಷಕಿಯೊಬ್ಬರು ಘಾಟಿ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನಡೆದಿದೆ.
ತಪಸೀಹಳ್ಳಿ ಗ್ರಾಮದ ನಿವಾಸಿ ಪುಷ್ಪಾವತಿ (30) ಮೃತ ದುರ್ದೈವಿ. ಕಳೆದ 11 ತಿಂಗಳ ಹಿಂದಷ್ಟೇ ವೇಣು ಎಂಬುವವರನ್ನು ವಿವಾಹವಾಗಿದ್ದ ಪುಷ್ಪಾವತಿ, ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪುಷ್ಪಾವತಿ ಮತ್ತು ವೇಣು ಅವರ ವೈವಾಹಿಕ ಜೀವನದಲ್ಲಿ ಆರಂಭದಿಂದಲೂ ಸಮಸ್ಯೆಗಳು ಕಾಡಿದ್ದವು. ಮದುವೆಯಾಗಿ ಬಂದ ಕೆಲವೇ ದಿನಗಳಲ್ಲಿ ಪತಿ ವೇಣು, ಅತ್ತೆ, ಮಾವ ಮತ್ತು ಮೈದುನರ ಕಿರುಕುಳ ಆರಂಭವಾಯಿತು. ವರದಕ್ಷಿಣೆಯ ಹೆಸರಿನಲ್ಲಿ ಹಣಕ್ಕಾಗಿ ನಿರಂತರ ಹಿಂಸೆ ನೀಡಲಾಗುತ್ತಿತ್ತು. ಪುಷ್ಪಾವತಿ ಅವರ ಕುಟುಂಬದಿಂದ ಹೆಚ್ಚಿನ ಹಣ ತರಬೇಕೆಂದು ಒತ್ತಾಯಿಸುತ್ತಿದ್ದರು.
ಇದರ ಜೊತೆಗೆ ಮಕ್ಕಳ ಬಗ್ಗೆಯೂ ವಿವಾದಗಳು ಉದ್ಭವಿಸಿದ್ದವು. ಪುಷ್ಪಾವತಿ ಮಕ್ಕಳು ಬೇಕು ಎಂದು ಪತಿಯ ಬಳಿ ಪ್ರಸ್ತಾಪಿಸಿದ್ದರು. ಆದರೆ, ವೇಣು ‘ಸ್ವಲ್ಪ ದಿನ ತಾಳು’ ಎಂದು ಹೇಳಿ, ನಂತರ ಅನುಮಾನದಿಂದ ಡಾಕ್ಟರ್ ಸಲಹೆ ಪಡೆಯಲು ಸಹ ಒಪ್ಪದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ಮಾಡಿದ್ದರೆಂದು ಆರೋಪಿಸಲಾಗಿದೆ.
ಕಳೆದ ಎರಡು ತಿಂಗಳ ಹಿಂದೆಯೇ ಪುಷ್ಪಾವತಿ ಈ ಕಿರುಕುಳವನ್ನು ಸಹಿಸಲಾರದೆ ಪೊಲೀಸರಿಗೆ ದೂರು ದಾಖಲಿಸಿದ್ದರು. ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಕುಟುಂಬದ ಸದಸ್ಯರ ಕಿರುಕುಳ ಕಡಿಮೆಯಾಗದೆ ಹೆಚ್ಚಾಯಿತು. ಪುಷ್ಪಾವತಿ ಅವರ ಕುಟುಂಬಸ್ಥರು ಸಹಾಯಕ್ಕಾಗಿ ಬಂದಾಗಲೂ ಅವರ ವಿರುದ್ಧ ಹಲ್ಲೆ ನಡೆಸಿದ್ದರೆಂದು ಹೇಳಲಾಗಿದೆ.ಕೊನೆಗೆ ಸಾವಿಗೂ ಮುನ್ನ ಅವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ, ಪತಿ ಮತ್ತು ಅತ್ತೆ-ಮಾವರ ಕಿರುಕುಳದ ಬಗ್ಗೆ ಕಣ್ಣೀರಿಟ್ಟು ಮಾತನಾಡಿದ್ದರು. ಅಲ್ಲದೇ, ಡೆತ್ ನೋಟ್ ಬರೆದಿಟ್ಟು ಘಾಟಿ ಡ್ಯಾಂಗೆ ಹಾರಿ ಪ್ರಾಣಬಿಟ್ಟಿದ್ದಾರೆ.





