ಮಂಗಳೂರು: ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ತಯಾರಾದ ರಿಷಬ್ ಶೆಟ್ಟಿ ನಿರ್ದೇಶನದ “ಕಾಂತಾರ” ಸಿನಿಮಾದ ಬಗ್ಗೆ ಪರ ವಿರೋಧ ಚರ್ಚೆಯಾಗುತ್ತಿದ್ದು, ಸಿನಿಮಾದಲ್ಲಿ ಎಲ್ಲೂ ದೈವಗಳಿಗೆ ಅಪಚಾರ ಆಗಿಲ್ಲ. ಸಿನಿಮಾವನ್ನು ಸಿನಿಮಾದ ರೀತಿಯಲ್ಲೇ ನೋಡಿದರೆ ಚೆಂದ. ಸಿನಿಮಾದ ಉದ್ದಕ್ಕೂ ಎಲ್ಲೂ ದೈವಗಳ ನಿಂದನೆಯಾಗಿಲ್ಲ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ಕಾಂತಾರ ಸಿನಿಮಾ ಇಂದು ವಿಶ್ವದೆಲ್ಲೆಡೆ ಬಿಡುಗಡೆಯಾಗಿ ಸಂಚಲನವನ್ನೇ ಸೃಷ್ಟಿ ಮಾಡಿದೆ. ಇದರ ಬೆನ್ನಲ್ಲೇ ಸಿನಿಮಾದ ಕುರಿತು ಅಪಸ್ವರ ಎದ್ದಿದೆ, ಪರ ವಿರೋಧ ಚರ್ಚೆಗಳು ನಡೆದಿದೆ. ದೈವ ನಂಬಿದವರ ಸ್ವತ್ತು. ದೈವ ಒಂದು ಜಾತಿಗೆ ಸೀಮಿತವಾದ ಸ್ವತ್ತಲ್ಲ. ಜಾತಿಮತಕ್ಕೆ ಮೀರಿದ ಸ್ವತ್ತು. ಕಾಂತಾರದಿಂದ ದೈವಭಕ್ತಿ ಹೆಚ್ಚಿದೆ. ಈ ಸಿನಿಮಾವನ್ನು ನಿರ್ದೇಶಿಸಿ ಪಾತ್ರ ನಿರ್ವಹಿಸಿರುವ ರಿಷಬ್ ಶೆಟ್ಟಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ನೆಲದ ಭಾಷೆಯ ಕಂಪನ್ನು ರಾಷ್ಟ್ರದೆಲ್ಲೆಡೆ ಪಸರಿಸಿದ್ದಾರೆ. ಸಿನಿಮಾದಿಂದ ದೈವಗಳ ಅವಹೇಳನ ಆಗಿಲ್ಲ. ಸಿನಿಮಾವನ್ನು ಸಿನಿಮಾದ ರೀತಿಯಲ್ಲೇ ನೋಡಿ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.