ಸಾಮಾನ್ಯವಾಗಿ ಫಿಲ್ಮ್ ಫೆಸ್ಟಿವಲ್‌ಗಳು ಆಗಾಗ, ಅಲ್ಲಲ್ಲಿ ನಡೀತಾನೇ ಇರುತ್ತವೆ. ಆದ್ರೆ ಮಕ್ಕಳ ಸಿನಿಮಾಗಳಿಗಾಗಿ ಪ್ರತ್ಯೇಕ ಚಿತ್ರೋತ್ಸವಗಳು ಮಾತ್ರ ಬಹು ವಿರಳ. ಅಂಥದ್ದೊಂದು ವೇದಿಕೆ ಕಳೆದ ವರ್ಷದಿಂದ ನಮ್ಮ ಬೆಂಗಳೂರಿನಲ್ಲಿ ಭಾಮಾ ಹರೀಶ್ ಹಾಗೂ ಅವ್ರ ಮಗ ಮಾಡಿಕೊಡ್ತಾ ಬರ್ತಿದ್ದಾರೆ. ಯೆಸ್.. ಕಳೆದ ವರ್ಷದಂತೆ ಈ ವರ್ಷವೂ ಬೆಂಗಳೂರು ಇಂಟರ್‌ನ್ಯಾಷನಲ್ ಚಿಲ್ಡ್ರನ್ ಫಿಲ್ಮ್ ಫೆಸ್ಟಿವಲ್ ನಡೆಯಿತು. ಮೋಹಕತಾರೆ ರಮ್ಯಾ ಮೆಚ್ಚಿದ ಪಪ್ಪಿ ಸೇರಿದಂತೆ ಯಾವೆಲ್ಲಾ ಚಿತ್ರಗಳು, ಕಲಾವಿದರು & ತಂತ್ರಜ್ಞರು ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡ್ರು ಅನ್ನೋದ್ರ ಫುಲ್ ಡಿಟೈಲ್ಸ್ ಇಲ್ಲಿದೆ.
- ರಾಜರತ್ನ ಅಪ್ಪು ಹೆಸರಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವ
- ಮೆಜೆಸ್ಟಿಕ್ ನಿರ್ಮಾಪಕನ ಪುತ್ರ ಉಲ್ಲಾಸ್ ನೇತೃತ್ವದಲ್ಲಿ ಫೆಸ್ಟ್..!
- 9 ಸಿನಿಮಾ.. 18 ಪ್ರಶಸ್ತಿ.. ಯಾರು ಬೆಸ್ಟ್? ಯಾರೆಲ್ಲಾ ಬಂದಿದ್ರು?
- ರಮ್ಯಾ ಮೆಚ್ಚಿದ ಪಪ್ಪಿ, ಚಿನ್ನಾರಿ ಮುತ್ತನ ಚಿತ್ರಕ್ಕೆ ಪ್ರಶಸ್ತಿಗಳ ಗರಿ..!
ರಾಜರತ್ನ, ಕರ್ನಾಟಕ ರತ್ನ ಅಪ್ಪು ಹೆಸರು ಹೇಳ್ತಿದ್ದಂತೆ ಮೊದಲಿಗೆ ನೆನಪಾಗುವುದೇ ಅವ್ರ ಬಾಲ್ಯದ ಸಿನಿಮಾಗಳು. ಹೌದು.. ಬಾಲನಟನಾಗಿದ್ದಾಗಲೇ ಬೆಟ್ಟದ ಹೂವು ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಪಡೆದಿದ್ರು ಪುನೀತ್ ರಾಜ್‌ಕುಮಾರ್. ಅಪ್ಪು ತಮ್ಮ ನಟನೆಯಿಂದಷ್ಟೇ ಅಲ್ಲದೆ, ಸಾಮಾಜಿಕ ಸೇವೆಯಿಂದಲೂ ಎಲ್ಲರ ಮನಸ್ಸಿನಲ್ಲಿ ಭದ್ರ ಸ್ಥಾನ ಪಡೆದಿದ್ದಾರೆ. ಅವರ ಸತ್ಕಾರ್ಯಗಳು ಎಲ್ಲರಿಗೂ ಸ್ಫೂರ್ತಿ ಆಗಬೇಕು. ಆ ನಿಟ್ಟಿನಲ್ಲಿ, ಅವರ ಹೆಸರಿನಲ್ಲೇ ಮಕ್ಕಳ ಚಲನಚಿತ್ರೋತ್ಸವ ಆರಂಭವಾಗಿರೋದು ನಿಜಕ್ಕೂ ಖುಷಿಯ ವಿಚಾರ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರೀತಿ, ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಕಳೆದ ವರ್ಷದಿಂದ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಯೋಜನೆ ಆಗ್ತಿದೆ. ಅಂಥದ್ದೊಂದು ವೇದಿಕೆ ಸಿದ್ದಗೊಳಿಸಿರೋದು ನಟ ದರ್ಶನ್‌ಗೆ ಮೆಜೆಸ್ಟಿಕ್ ಸಿನಿಮಾನ ನಿರ್ಮಾಣ ಮಾಡಿದ್ದ ಭಾಮಾ ಹರೀಶ್ ಹಾಗೂ ಅವ್ರ ಪುತ್ರ ಉಲ್ಲಾಸ್. ಯೆಸ್.. ಕಳೆದ ವರ್ಷವೇ ಕೇಂದ್ರ ಸಚಿವ ವಿ ಸೋಮಣ್ಣ, ಪಿಆರ್‌ಕೆ ಒಡತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಂದು ಈ BICFF- ಬೆಂಗಳೂರು ಇಂಟರ್‌ನ್ಯಾಷನಲ್ ಚಿಲ್ಡ್ರನ್ ಫಿಲ್ಮ್ ಫೆಸ್ಟಿವಲ್‌ಗೆ ಚಾಲನೆ ನೀಡಿದ್ರು. ಎಸ್ ನಾರಾಯಣ್, ಗಿರೀಶ್ ಕಾಸರವಳ್ಳಿ, ಸುಂದರ್‌ರಾಜ್ ಸೇರಿದಂತೆ ಸಾಕಷ್ಟು ಮಂದಿ ಸಾಥ್ ನೀಡಿದ್ರು.
ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಸಂಸ್ಥೆ ನಡೆಸ್ತಿರೋ ಭಾಮಾ ಹರೀಶ್ ಪುತ್ರ ಉಲ್ಲಾಸ್, ಸಣ್ಣ ವಯಸ್ಸಿನಲ್ಲೇ ಇಂಥದ್ದೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಅದ್ರಲ್ಲೂ ಮಕ್ಕಳ ಸಿನಿಮಾಗಳನ್ನ ಉತ್ತೇಜಿಸುವ ಇವರ ಆಲೋಚನೆಯೇ ಮೆಚ್ಚುವಂಥದ್ದು. ಈ ಬಾರಿ ಕೂಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿಯಿಂದ 2ನೇ ಆವೃತ್ತಿಯ ಚಿಣ್ಣರ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಸೆಪ್ಟೆಂಬರ್ 22ರಿಂದ 26 ತನಕ ಸುಮಾರು ಐದು ದಿನಗಳ ಕಾಲ ಬೆಂಗಳೂರಿನಲ್ಲಿ 2ನೇ BICFF ನಡೆಯಿತು.
ಈ ಬಾರಿ ಒಟ್ಟು 9 ಸಿನಿಮಾಗಳ ಪ್ರದರ್ಶನ ನಡೆದಿದ್ದು, ಆಯ್ದ ಮಕ್ಕಳ ಸಿನಿಮಾಗಳಿಗೆ 18 ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಳನ್ನ ನೀಡಿ ಉತ್ತೇಜಿಸಲಾಯಿತು. ಸ್ಯಾಂಡಲ್‌ವುಡ್ ಕ್ವೀನ್, ಮೋಹಕತಾರೆ ರಮ್ಯಾ ಸಪೋರ್ಟ್ ಮಾಡಿದ್ದ ಪಪ್ಪಿ ಚಿತ್ರ, ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಮೊದಲ ರನ್ನರ್ ಅಪ್ ಆಗಿ ಕರಡಿಗುಡ್ಡ ಹಾಗೂ ಎರಡನೇ ರನ್ನರ್ ಅಪ್ ಆಗಿ ಬಾಲ್ಯ ಸಿನಿಮಾ ಪ್ರಶಸ್ತಿಗಳನ್ನ ಪಡೆದವು.
ಪುರುಷರ ವಿಭಾಗದಲ್ಲಿ ಅತ್ಯುತ್ತಮ ಬಾಲನಟರಾಗಿ ಸ್ವರಾಜ್ಯ ಚಿತ್ರದ ನಟನೆಗಾಗಿ ವರುಣ್ ಗಂಗಾಧರ್, ಜೀನಿಯಸ್ ಮುತ್ತಾ ಚಿತ್ರದ ನಟನೆಗಾಗಿ ಮಾಸ್ಟರ್ ಶ್ರೇಯಸ್ ಪ್ರಶಸ್ತಿಗಳನ್ನ ಪಡೆದರು. ಇನ್ನು ಟೇಕ್ವಾಂಡೋ ಗರ್ಲ್ ಸಿನಿಮಾದ ನಟನೆಗಾಗಿ ರುತು, ಇದು ನಮ್ಮ ಶಾಲೆ ಚಿತ್ರದ ನಟನೆಗಾಗಿ ಪುಣ್ಯಶ್ರೀ ಅತ್ಯುತ್ತಮ ಬಾಲನಟಿ ಪ್ರಶಸ್ತಿಗಳಿಗೆ ಭಾಜನರಾದರು.
ಜೀನಿಯಸ್ ಮುತ್ತಾ ಚಿತ್ರದ ಅಭಿನಯಕ್ಕಾಗಿ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಬೆಸ್ಟ್ ಆ್ಯಕ್ಟರ್ ಅನಿಸಿಕೊಂಡ್ರೆ, ಸ್ವರಾಜ್ಯ ಚಿತ್ರದಲ್ಲಿನ ಪಾತ್ರಕ್ಕಾಗಿ ವೀಣಾ ಸುಂದರ್ ಅತ್ಯುತ್ತಮ ನಟಿ ಗರಿ ಪಡೆದರು.
ಏಕಲವ್ಯ ಚಿತ್ರದ ನಟನೆಗೆ ಸುಮನ್ ಅತ್ಯುತ್ತಮ ಪೋಷಕನಟ, ಜೀನೀಸ್ ಮುತ್ತಾ ಚಿತ್ರಕ್ಕಾಗಿ ಪದ್ಮಾ ವಾಸಂತಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳಿಗೆ ಪಾತ್ರರಾದರು. ಇನ್ನು ಜೀನಿಯಸ್ ಮುತ್ತ ಚಿತ್ರದ ನಿರ್ದೇಶನಕ್ಕಾಗಿ ಟಿ. ಎಸ್ ನಾಗಾಭರಣರ ಪತ್ನಿ ನಾಗಿಣಿ ಭರಣಗೆ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ಗಾಯಕಿಯಾಗಿ ಚಿಣ್ಣರ ಚಂದ್ರ ಚಿತ್ರದ ಗಾಯನಕ್ಕಾಗಿ ಶಮಿತಾ ಮಲ್ನಾಡ್‌ರನ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಟ್ಟಾರೆ ಸ್ವರಾಜ್ಯ ಹಾಗೂ ಜೀನಿಯಸ್ ಮುತ್ತಾ ಚಿತ್ರಗಳೇ ಸಾಲು ಸಾಲು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದು ವಿಶೇಷ.
ಒಟ್ಟಾರೆ ಈ ರೀತಿ ಒಳ್ಳೆಯ ಮಕ್ಕಳ ಚಿತ್ರಗಳನ್ನ ಗುರ್ತಿಸಿ, ಮಕ್ಕಳು ಸಮೇತ ಅದರ ಕಲಾವಿದರು, ತಂತ್ರಜ್ಞರನ್ನ ಉತ್ತೇಜಿಸಿ, ಪ್ರಶಸ್ತಿಗಳನ್ನ ನೀಡುವುದರಿಂದ ಅವರಲ್ಲಿರೋ ಸಿನಿಮೋತ್ಸಾಹ ಮತ್ತಷ್ಟು ಹೆಚ್ಚಲಿದೆ. ಇದು ಇದೇ ರೀತಿ ಪ್ರತೀ ವರ್ಷ, ಮತ್ತಷ್ಟು, ಮಗದಷ್ಟು ದೊಡ್ಡ ಮಟ್ಟದಲ್ಲಿ ಬೆಳೆದುಕೊಂಡು ಹೋಗಲಿ. ಪರಭಾಷಾ ಮಕ್ಕಳ ಚಿತ್ರಗಳಿಗೂ ಪ್ರಶಸ್ತಿ ನೀಡುವಂತಾಗಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್