ಬೆಂಗಳೂರು: 2025-26 ಶೈಕ್ಷಣಿಕ ವರ್ಷದಿಂದ ಎಸ್ಎಸ್ಎಲ್‌ಸಿ (SSLC) ಪರೀಕ್ಷಾ ಶುಲ್ಕವನ್ನು 5% ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ವಿದ್ಯಾರ್ಥಿ ಮತ್ತು ಪೋಷಕರಿಗೆ ದೊಡ್ಡ ಆಘಾತ ಕೊಟ್ಟಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬದಲಾವಣೆಗೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಈ ಹೊಸ ಶುಲ್ಕ ವಿನ್ಯಾಸವು ಎಲ್ಲಾ ವರ್ಗದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ. ಪ್ರಥಮ ಬಾರಿಗೆ ಪರೀಕ್ಷೆಗೆ ಬರುವ ನಿಯಮಿತ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹಳೆಯ 676 ರೂಪಾಯಿಯಿಂದ ಹೆಚ್ಚಿಸಿ 710 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರೊಂದಿಗೆ ಖಾಸಗಿ ಅಭ್ಯರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕದಲ್ಲೂ ಸರಿಪಡಿಕೆ ಮಾಡಲಾಗಿದೆ.
ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ, ನೋಂದಣಿ ಮತ್ತು ಅರ್ಜಿ ಶುಲ್ಕವನ್ನು 236 ರೂಪಾಯಿಯಿಂದ 248 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದೇ ವೇಳೆ, ಈಗಾಗಲೇ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ 69 ರೂಪಾಯಿಯಿಂದ 72 ರೂಪಾಯಿಗೆ ಹೆಚ್ಚಾಗಿದೆ.
ಪುನರಾವರ್ತಿತ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಕೂಡಾ ಪರಿಷ್ಕರಿಸಲಾಗಿದೆ. ಇನ್ನು ಒಂದೇ ವಿಷಯಕ್ಕೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳು 427 ರೂಪಾಯಿ ಬದಲಾಗಿ 448 ರೂಪಾಯಿ ಪಾವತಿಸಬೇಕಾಗುತ್ತದೆ. ಎರಡು ವಿಷಯಗಳಿಗೆ ಪರೀಕ್ಷೆ ಬರೆಯುವವರು 532 ರೂಪಾಯಿ ಬದಲಾಗಿ 559 ರೂಪಾಯಿ ಪಾವತಿಸಬೇಕಾಗುತ್ತದೆ. ಮೂರು ಮತ್ತು ಮೂರಕ್ಕಿಂತ ಹೆಚ್ಚು ವಿಷಯಗಳಿಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಶುಲ್ಕ 716 ರೂಪಾಯಿಯಿಂದ ಹೆಚ್ಚಿಸಿ 752 ರೂಪಾಯಿಗೆ ಏರಿಕೆ ಮಾಡಲಾಗಿದೆ.