ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವಗಳನ್ನು ಅನುಮಾನಾಸ್ಪದ ರೀತಿಯಲ್ಲಿ ಸಾಗಾಟ ಮಾಡಿ, ಹೂತಿಟ್ಟ ಆರೋಪದಡಿ ನಡೆಯುತ್ತಿರುವ ತನಿಖೆಗೆ ಮತ್ತೊಂದು ತಿರುವು ಸಿಕ್ಕಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆಂಬುಲೆನ್ಸ್ ಚಾಲಕರನ್ನು ವಿಚಾರಣೆಗೆ ಒಳಪಡಿಸಿದ್ದು, ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದೆ. ಕಳೆದ 23 ವರ್ಷಗಳಿಂದ ಶವ ಸಾಗಾಟದಲ್ಲಿ ತೊಡಗಿರುವ ಈ ಚಾಲಕರಿಂದ ದಾಖಲಾದ ಹೇಳಿಕೆಗಳು ತನಿಖೆಯನ್ನು ಮತ್ತಷ್ಟು ತನಿಖೆ ಚುರುಕುಗೊಳಿಸಿದೆ.
ಆಂಬುಲೆನ್ಸ್ ಚಾಲಕರಿಂದ ಮಹತ್ವದ ಮಾಹಿತಿ
ಬೆಳ್ತಂಗಡಿಯ ಜಲಿಲ್ ಬಾಬಾ ಮತ್ತು ಹಮೀದ್ ಯುಡಿಆರ್ ಎಂಬ ಇಬ್ಬರು ಆಂಬುಲೆನ್ಸ್ ಚಾಲಕರಿಗೆ ಎಸ್‌ಐಟಿ ನೋಟಿಸ್ ಜಾರಿಗೊಳಿಸಿ, ವಿಚಾರಣೆ ನಡೆಸಿದೆ. ಈ ಚಾಲಕರು ಸ್ಥಳೀಯ ಪೊಲೀಸರ ನಿರ್ದೇಶನದಂತೆ ಶವ ಸಾಗಾಟ ಮಾಡಿದ್ದೇವೆ ಎಂದು ವಿಚಾರಣೆಯ ವೇಳೆ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆರೋಪಿ ಚಿನ್ನಯ್ಯನ ಹೇಳಿಕೆಯನ್ನು ಆಧರಿಸಿ, ಎಸ್‌ಐಟಿ ಈ ಚಾಲಕರನ್ನು ವಿಚಾರಣೆಗೆ ಕರೆಸಿದೆ. ಚಿನ್ನಯ್ಯನ ಹೇಳಿಕೆಯಲ್ಲಿ ಕೆಲವು ಪ್ರಮುಖ ಸುಳಿವುಗಳು ದೊರೆತಿರುವುದರಿಂದ, ತನಿಖೆಯು ಈಗ ಹೊಸ ದಿಕ್ಕಿನಲ್ಲಿ ಸಾಗಿದೆ.
ಪ್ರಕರಣದ ಹಿನ್ನೆಲೆ
ಧರ್ಮಸ್ಥಳದ ವಿವಿಧೆಡೆ ಶವಗಳನ್ನು ಅಕ್ರಮವಾಗಿ ಸಾಗಾಟ ಮಾಡಿ, ಹೂತಿಟ್ಟ ಆರೋಪದಡಿ ಈ ಪ್ರಕರಣ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಸ್ಥಳೀಯ ಜನತೆಯಲ್ಲಿ ಆತಂಕ ಮೂಡಿಸಿರುವ ಈ ಘಟನೆಯ ಬಗ್ಗೆ ಎಸ್‌ಐಟಿ ತೀವ್ರ ತನಿಖೆ ನಡೆಸುತ್ತಿದೆ. ಶವ ಸಾಗಾಟದಲ್ಲಿ ತೊಡಗಿದ್ದವರಿಗೆ ಸ್ಥಳೀಯ ಪೊಲೀಸರಿಂದ ಯಾವ ರೀತಿಯ ಸೂಚನೆಗಳು ಬಂದಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಲು ಎಸ್‌ಐಟಿ ಪ್ರಯತ್ನಿಸುತ್ತಿದೆ.
ಎಸ್‌ಐಟಿ ಈಗ ಚಿನ್ನಯ್ಯನ ಹೇಳಿಕೆಯ ಜೊತೆಗೆ ಆಂಬುಲೆನ್ಸ್ ಚಾಲಕರಿಂದ ದೊರೆತ ಮಾಹಿತಿಯನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ಶವ ಸಾಗಾಟದ ಸಂದರ್ಭದಲ್ಲಿ ಯಾವೆಲ್ಲ ಕಾನೂನು ಉಲ್ಲಂಘನೆಗಳಾಗಿವೆ, ಯಾರೆಲ್ಲ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಕಂಡುಹಿಡಿಯಲು ತಂಡವು ಶ್ರಮಿಸುತ್ತಿದೆ. ಈಗಾಗಲೇ ಸ್ಥಳೀಯ ಪೊಲೀಸರ ಕೆಲವು ಕ್ರಮಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಆಂಬುಲೆನ್ಸ್ ಚಾಲಕರ ಹೇಳಿಕೆಯ ಆಧಾರದ ಮೇಲೆ, ಪೊಲೀಸರ ಒಡಂಬಡಿಕೆಯನ್ನು ಸಹ ಎಸ್‌ಐಟಿ ಪರಿಶೀಲಿಸುವ ಸಾಧ್ಯತೆ ಇದೆ.





