ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2025 ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನದ ಬ್ಯಾಟ್ಸ್ಮನ್ ಸಾಹಿಬ್ಜಾದಾ ಫರ್ಹಾನ್ ಅವರ ಬ್ಯಾಟ್ ಮತ್ತು ವರ್ತನೆ ಎರಡೂ ಚರ್ಚೆಯ ಕೇಂದ್ರಬಿಂದುವಾಗಿವೆ.
ಪಾಕಿಸ್ತಾನವನ್ನು ಮೊದಲು ಬ್ಯಾಟಿಂಗ್ಗೆ ಕಳುಹಿಸಿದ ಭಾರತದ ನೇತೃತ್ವದಲ್ಲಿ, ಸಾಹಿಬ್ಜಾದಾ ಫರ್ಹಾನ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಅವರು ಭಾರತದ ಪ್ರಧಾನ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ವಿಶೇಷವಾಗಿ ಟಾರ್ಗೆಟ್ ಮಾಡಿ, ಟಿ20ಅಂತರರಾಷ್ಟ್ರೀಯದಲ್ಲಿ ಬುಮ್ರಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಸೃಷ್ಟಿಸಿದರು. 38 ಎಸೆತಗಳಲ್ಲಿ 5 ಫೋರ್ಸ್ ಮತ್ತು 3 ಸಿಕ್ಸರ್ಗಳ ಸಹಯತೆಯಿಂದ 57 ರನ್ಗಳ ತೀವ್ರಗತಿಯ ಇನ್ನಿಂಗ್ಸ್ ಆಡಿದ ಫರ್ಹಾನ್ ಪಾಕಿಸ್ತಾನದ ಒಟ್ಟು ಸ್ಕೋರನ್ನು ಉತ್ತಮ ಸ್ಥಾನಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.
ಆದರೆ, ಅವರ ಇನ್ನಿಂಗ್ಸ್ನ ಅಂತ್ಯ ವಿವಾದಾತ್ಮಕವಾಗಿತ್ತು. ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಓವರ್ನಲ್ಲಿ ಒಂದು ಸಿಕ್ಸರ್ ಬಾರಿಸಿದ ಧೈರ್ಯಶಾಲಿ ಫರ್ಹಾನ್, ಅದೇ ಓವರ್ನ ಮುಂದಿನ ಎಸೆತದಲ್ಲಿ ಡೀಪ್ ಮಿಡ್-ವಿಕೆಟ್ನಲ್ಲಿ ನಿಂತಿದ್ದ ತಿಲಕ್ ವರ್ಮಾ ಅವರ ಕೈಗೆ ಕ್ಯಾಚ್ ನೀಡಿ ಔಟಾದರು. ಔಟಾದ ತಕ್ಷಣ, ಫರ್ಹಾನ್ ಅವರಲ್ಲಿ ಕೋಪ ಹೊರಚೆಲ್ಲಿತು. ಅವರು ವಿಕೆಟ್ ಬದಿಯಲ್ಲಿ ನೆಲದ ಮೇಲೆ ಕುಳಿತು, ತಮ್ಮ ಬ್ಯಾಟ್ ಅನ್ನು ಕೋಪದಿಂದ ನೆಲಕ್ಕೆ ಹೊಡೆದ ದೃಶ್ಯವನ್ನು ಕ್ಯಾಮೆರಾ ಪತ್ತೆಹಚ್ಚಿತು.





