ನವರಾತ್ರಿಯ ಸಂದರ್ಭದಲ್ಲಿ, ಚಿತ್ರರಂಗದ ಹೆಸರಾಂತ ನಿರ್ದೇಶಕ ಡಾ. ಎಸ್. ನಾರಾಯಣ್ ಅವರ ಬಹುನಿರೀಕ್ಷಿತ ಚಿತ್ರ ‘ಮಾರುತ’ಗಾಗಿ ‘ನಮ್ಮಮ್ಮ ಸವದತ್ತಿ ಎಲ್ಲಮ್ಮ’ ಹಾಡು ಅನಾವರಣವಾಗಿದೆ. ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾದ ಈ ಭಕ್ತಿ ಪ್ರಧಾನ ಹಾಡು ಈಗಾಗಲೇ ಕರುನಾಡನ್ನು ‘ಉಧೋ ಉಧೋ’ ಎನ್ನುವಂತೆ ಮಾಡಿದೆ .
ಚಿತ್ರದ ವಿಶೇಷತೆ
‘ಮಾರುತ’ ಚಿತ್ರವು ದುನಿಯಾ ವಿಜಯ್ ಮತ್ತು ಶ್ರೇಯಸ್ ಮಂಜು ಪ್ರಮುಖ ಪಾತ್ರಗಳಲ್ಲಿ ನಟಿಸಿದೆ. ಕೆ.ಮಂಜು ಮತ್ತು ರಮೇಶ್ ಯಾದವ್ ಅವರ ಈಶಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ದೇಶಕ ಎಸ್. ನಾರಾಯಣ್ ಅವರೇ ಹಾಡನ್ನು ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನನ್ಯ ಭಟ್ ಅವರ ಮಧುರ ಕಂಠದಲ್ಲಿ ಮೂಡಿಬಂದ ಈ ಹಾಡಿನಲ್ಲಿ ನಾಯಕಿ ಬೃಂದಾ ಆಚಾರ್ಯ ಅವರು ಅಭಿನಯಿಸಿದ್ದಾರೆ .
ಹಾಡಿನ ಬಿಡುಗಡೆಯ ಅನಂತರ ಚಿತ್ರದ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಎಸ್. ನಾರಾಯಣ್, ‘“ರೈಲಿಗೆ ಎಂಜಿನ್ ಹೇಗೆ ಮುಖ್ಯವೋ, ಹಾಗೆ ನಮ್ಮ ಚಿತ್ರದ ಬಹು ಮುಖ್ಯ ಪಾತ್ರಕ್ಕೆ ದುನಿಯಾ ವಿಜಯ್ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ. ಶ್ರೇಯಸ್ ಮಂಜು ಮತ್ತು ಬೃಂದಾ ಆಚಾರ್ಯ ಅವರ ಅಭಿನಯವೂ ಚೆನ್ನಾಗಿದೆ” ಎಂದು ಹೇಳಿದ್ದಾರೆ.
ಚಿತ್ರದಲ್ಲಿ ತಾರಾ, ರಂಗಾಯಣ ರಘು, ಸಾಧು ಕೋಕಿಲ, ಕಲ್ಯಾಣಿ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಸಹ ಕಾಣಸಿಗುವುದರ ಜೊತೆಗೆ, ಕ್ರೇಜಿ ಸ್ಟಾರ್ ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ .
ಕುಟುಂಬಕ್ಕೆ ಮತ್ತು ಯುವಜನತೆಗೆ ಸಂದೇಶ
‘ಮಾರುತ’ ಚಿತ್ರವು ಕೇವಲ ಮನರಂಜನೆಯ ಚಿತ್ರವಲ್ಲ. ನಿರ್ದೇಶಕರ ಮಾತಿನಂತೆ, ಇದು ನೋಡುಗರಿಗೆ ಬೇಕಾಗಿರುವ ಎಲ್ಲಾ ಅಂಶಗಳನ್ನೊಳಗೊಂಡ ಒಂದು ಕೌಟುಂಬಿಕ ಚಿತ್ರ. ಸಾಮಾಜಿಕ ಜಾಲತಾಣಗಳ ಉಪಯೋಗ ಮತ್ತು ಅಪಾಯಗಳ ಬಗ್ಗೆ ಯುವಜನತೆಗೆ ಎಚ್ಚರಿಕೆ ನೀಡುವ ಉತ್ತಮ ಸಂದೇಶವೂ ಇದರಲ್ಲಿದೆ. ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚು ಗಮನ ನೀಡಬೇಕು ಎಂಬ ಸಂದೇಶವನ್ನೂ ಈ ಚಿತ್ರ ನೀಡುತ್ತದೆ.
ಇರತೆ ಕಲಾವಿದರ ಮಾತು
ನಟ ಶ್ರೇಯಸ್ ಮಂಜು ಅವರು, ನಿರ್ದೇಶಕ ಎಸ್. ನಾರಾಯಣ್ ಅವರ ಶಿಸ್ತು ಎಲ್ಲರಿಗೂ ಮಾದರಿ. ನಾನು ಅವರಿಂದ ಬಹಳ ಕಲಿತಿದ್ದೇನೆ. ನವರಾತ್ರಿ ಸಂದರ್ಭದಲ್ಲಿ ಈ ಸುಮಧುರ ಭಕ್ತಿಗೀತೆಯನ್ನು ನೀಡಿದ್ದಾರೆ. ಅಕ್ಟೋಬರ್ 31ರಂದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು .
ನಿರ್ಮಾಪಕ ಕೆ.ಮಂಜು ಅವರು ಚಿತ್ರದ ನಿಜವಾದ ಹೀರೋ ನಿರ್ಮಾಪಕ ಎಂದು ಸೂಚಿಸಿದರು. ಎಸ್. ನಾರಾಯಣ್ ಮತ್ತು ದುನಿಯಾ ವಿಜಯ್ ಅವರೊಂದಿಗೆ ಇದು ನನ್ನ ಮೂರನೇ ಚಿತ್ರ. ಸಮಾಜಕ್ಕೆ ಸಂದೇಶ ನೀಡುವ ಈ ಚಿತ್ರವನ್ನು ನಿರ್ಮಿಸಿದ್ದು ಸಂತೋಷದ ವಿಷಯ. ನಮ್ಮಮ್ಮ ಸವದತ್ತಿ ಎಲ್ಲಮ್ಮ ಹಾಡಿನ ಚಿತ್ರೀಕರಣಕ್ಕೆ ಒಂದೇ ದಿನದಲ್ಲಿ ಸುಮಾರು 65 ಲಕ್ಷ ರೂಪಾಯಿ ಖರ್ಚಾಗಿದೆ ಮತ್ತು ಇದು ತೆರೆಯ ಮೇಲೆ ಅದ್ದೂರಿಯಾಗಿ ಕಾಣಸಿಗುತ್ತದೆ ಎಂದರು .
ನಟಿ ಬೃಂದಾ ಆಚಾರ್ಯ ಅವರು ಕೂಡಾ ನಿರ್ದೇಶಕರ ಶಿಸ್ತಿನ ಬಗ್ಗೆ ಮಾತನಾಡಿದರು. ಈ ಹಾಡನ್ನು ಎರಡು ದಿನಗಳಲ್ಲಿ ಚಿತ್ರೀಕರಿಸಲು ಯೋಜನೆಯಾಗಿತ್ತು, ಆದರೆ ನಿರ್ದೇಶಕರು ಅವಧಿಗೂ ಮುಂಚಿತವಾಗಿ ಮುಗಿಸಿದರು. ಚಿತ್ರವನ್ನು ತೆರೆಯ ಮೇಲೆ ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದರು. ಅಕ್ಟೋಬರ್ 31, 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ‘ಮಾರುತ’ ಚಿತ್ರವು ಪ್ರೇಕ್ಷಕರನ್ನು ಕಾತುರದಿಂದ ಕಾಯ್ತಿದೆ.





