ಹಾಸನ: ನಾಡಿನಾದ್ಯಂತ ಅತ್ಯಂತ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಹಾಸನದ ರಾಷ್ಟ್ರೋತ್ಥಾನ ವಿದ್ಯಾ ಶಾಲೆಯಲ್ಲಿಯೂ ಕೂಡ ರಟ್ಟಿನಿಂದ ಅರಳಿದ ಬೃಹತ್ ಗಾತ್ರದ ಮೈಸೂರು ಅರಮನೆ ಹಾಗೂ ಗೊಂಬೆ ಪೂಜೆ ಮಾಡುವ ಮೂಲಕ ಸಂಭ್ರಮದ ದಸರಾ ಹಬ್ಬವನ್ನು ಆಚರಣೆ ಮಾಡಲಾಯಿತು.
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಶಾಲೆಯ ಪ್ರಧಾನಾಚಾರ್ಯರಾದ ಉಮಾ ಎಸ್ ಪಾಟೀಲ್ ಮಾತಾಜಿ , ಅದೇ ರೀತಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ಬಸವರಾಜ್ ಸಿ,ಎಸ್ ಅವರು ಮೈಸೂರು ಅರಮನೆಯನ್ನು ರಟ್ಟಿನಿಂದ ನಿರ್ಮಿಸಿದ್ದು, ದುರ್ಗಾದೇವಿ ಭಾವಚಿತ್ರ ರಚಿಸಿದ್ದಾರೆ. ಮೈಸೂರು ದಸರಾ ಆಚರಣೆ ಮತ್ತು ಮೈಸೂರು ಅರಮನೆಯನ್ನು ರಟ್ಟಿನಲ್ಲಿ ನಿರ್ಮಿಸಿ, ಅಂದವಾದ ಪೇಂಟಿಂಗ್ ಮಾಡುವ ಮೂಲಕ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ.
ಅಲ್ಲದೇ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೃತ್ಯದ ಮೂಲಕ ಹಬ್ಬದ ಮಹತ್ವವನ್ನು ತೋರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಬಲ ಗುರೂಜಿ ಯಮನಪ್ಪ ತಬಲಾ ಬಾರಿಸುವ ಮೂಲಕ ಸಾಥ್ ನೀಡಿದ್ರು. ಭಕ್ತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವ ಪ್ರಾರ್ಥನೆ ಮಾಡುವ ಮೂಲಕ ಸಂಭ್ರಮಿಸಿದರು..





