ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ಭೀಕರ ವೈಮಾನಿಕ ದಾಳಿಯೊಂದರಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ದಾಳಿಯು ಸೋಮವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಮಾತ್ರೆ ದಾರಾ ಗ್ರಾಮದ ಮೇಲೆ ನಡೆದಿದ್ದು, ಜೆ-17 ಯುದ್ಧ ವಿಮಾನಗಳಿಂದ ಎಂಟು LS-6 ಬಾಂಬ್‌ಗಳನ್ನು ಗುಂಡಿನ ಸುರಿಮಳೆಯಂತೆ ಹಾರಿಸಲಾಗಿದೆ. ಈ ದಾಳಿಯಿಂದ ಗ್ರಾಮವು ನಾಶದ ಅಂಚಿಗೆ ತಲುಪಿದ್ದು, ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದೆ.
ರಕ್ಷಣಾ ತಂಡಗಳು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದು, ಅವಶೇಷಗಳಡಿಯಲ್ಲಿ ಶವಗಳನ್ನು ಹುಡುಕುವ ಕಾರ್ಯದಲ್ಲಿ ತೊಡಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ವರದಿಗಳು ಸೂಚಿಸಿವೆ. ಈ ಘಟನೆಯ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ದಾಳಿಯಿಂದ ಗಾಯಗೊಂಡವರಿಗೆ ತಕ್ಷಣದ ವೈದ್ಯಕೀಯ ಸಹಾಯದ ಅಗತ್ಯವಿದ್ದು, ಸ್ಥಳೀಯ ಆಸ್ಪತ್ರೆಗಳು ತುರ್ತು ಸ್ಥಿತಿಯನ್ನು ಘೋಷಿಸಿವೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರಿದಿದ್ದು, ಗಾಯಾಳುಗಳು ಮತ್ತು ಸಾವಿನ ಸಂಖ್ಯೆಯ ಬಗ್ಗೆ ಸ್ಪಷ್ಟ ಮಾಹಿತಿ ಶೀಘ್ರದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.





