ಹೈದರಾಬಾದ್: ದೇಶದಲ್ಲಿ ದಿನೇ ದಿನೇ ಕೊಲೆ ಪ್ರಕರಣಗಳು ಹೆಚ್ಚತ್ತಲೇ ಇವೆ. ಹೈದರಾಬಾದ್‌ನ ಕುಕತ್‌ಪಲ್ಲಿ ಪ್ರದೇಶದ ಸ್ಕ್ಯಾನ್ ಲೇಕ್ ಗೇಟೆಡ್ ಕಮ್ಯುನಿಟಿಯಲ್ಲಿ ರೇಣು ಅಗರ್ವಾಲ್ ಎಂಬ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ, ಚಿನ್ನಾಭರಣ ದೋಚಿ ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ದೇಶಾದ್ಯಂತ ಆತಂಕ ಮೂಡಿಸಿದೆ.
ಕೊಲೆಗಾರನು ಮಹಿಳೆಯ ಕೈ-ಕಾಲುಗಳನ್ನು ಕಟ್ಟಿ, ಕುಕ್ಕರ್‌ನ ಮುಚ್ಚಳದಿಂದ ತಲೆಗೆ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಆತನು ಮನೆಯಲ್ಲಿ ಸ್ನಾನ ಮಾಡಿ, ಬೇರೆ ಬಟ್ಟೆಗಳನ್ನು ಧರಿಸಿ, ಚಿನ್ನ ಮತ್ತು ಹಣವನ್ನು ಕದ್ದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ಸ್ಥಳದಲ್ಲಿ ರಕ್ತದ ಕಲೆಗಳು ಮತ್ತು ಕೊಲೆಗೆ ಬಳಸಿದ ಕುಕ್ಕರ್ ಮುಚ್ಚಳವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯರ ಮಾಹಿತಿಯ ಮೇರೆಗೆ ಕುಕತ್‌ಪಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ರೇಣು ಅಗರ್ವಾಲ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ಪೊಲೀಸರ ಪ್ರಕಾರ, 11 ದಿನಗಳ ಹಿಂದೆ ಇಬ್ಬರು ಯುವಕರು ರೇಣು ಅಗರ್ವಾಲ್ ಅವರ ಮನೆಗೆ ಕೆಲಸಕ್ಕೆ ಬಂದಿದ್ದರು. ಈ ಯುವಕರ ಮೇಲೆ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ಮುಂದುವರೆಸಲಾಗಿದೆ.





