ನವದೆಹಲಿ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ದರ ಪರಿಷ್ಕರಣೆಯ ಬಳಿಕ, ಗ್ರಾಹಕರಿಗೆ ಈ ಸುಧಾರಣೆಯ ಲಾಭ ತಲುಪಿಸುವ ಸಲುವಾಗಿ ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯವು ಉತ್ಪಾದಕರು, ತಯಾರಕರು, ವಿತರಕರು ಮತ್ತು ಮಾರಾಟಗಾರರಿಗೆ ಕಟ್ಟುನಿಟ್ಟಾದ ನಿರ್ದೇಶನಗಳನ್ನು ಹೊರಡಿಸಿದೆ. ಎಲ್ಲಾ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಹಳೆಯ ದರದ ಜತೆಗೆ ಹೊಸ ದರಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ನಿರ್ದೇಶನ ನೀಡಿದೆ.
ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯದ ಪ್ರಮುಖ ನಿರ್ದೇಶನಗಳು:
- ಹೊಸ ದರ ನಮೂದಿಸುವುದು ಕಡ್ಡಾಯ: ಉತ್ಪಾದಕರು ಮತ್ತು ವಿತರಕರು ತಮ್ಮ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಹಳೆಯ ದರದ ಜೊತೆಗೆ ಹೊಸ ಜಿಎಸ್‌ಟಿ ದರವನ್ನು ಸ್ಟಿಕರ್, ಸ್ಟ್ಯಾಂಪ್ ಅಥವಾ ಆನ್‌ಲೈನ್ ಪ್ರಿಂಟಿಂಗ್ ಮೂಲಕ ಸ್ಪಷ್ಟವಾಗಿ ಗುರುತಿಸಬೇಕು.
- ಮೂಲ ಎಂಆರ್‌ಪಿ ಮತ್ತು ಪರಿಷ್ಕೃತ ಎಂಆರ್‌ಪಿ: ಉತ್ಪನ್ನದ ಮೇಲೆ ಹಳೆಯ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಮತ್ತು ಪರಿಷ್ಕೃತ ಎಂಆರ್‌ಪಿಯನ್ನು ಎರಡೂ ನಮೂದಿಸಬೇಕು. ಹಳೆಯ ದರವನ್ನು ಅಳಿಸಿ ಹೊಸ ದರವನ್ನು ಮಾತ್ರ ನಮೂದಿಸುವಂತಿಲ್ಲ.
- ಗ್ರಾಹಕರಿಗೆ ಪಾರದರ್ಶಕತೆ: ಹಳೆಯ ದರ ಮತ್ತು ಕಡಿಮೆಯಾದ ಹೊಸ ದರವನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಯುವಂತೆ ಮಾಡಬೇಕು, ಇದರಿಂದ ಜಿಎಸ್‌ಟಿ ಸುಧಾರಣೆಯ ಲಾಭ ಜನರಿಗೆ ತಿಳಿಯುತ್ತದೆ.
- ಜಾಹೀರಾತು ಕಡ್ಡಾಯ: ಉತ್ಪಾದಕರು ತಮ್ಮ ಉತ್ಪನ್ನಗಳ ದರ ಪರಿಷ್ಕರಣೆಯ ಬಗ್ಗೆ ಪತ್ರಿಕೆಗಳು, ಟಿವಿ, ಮತ್ತು ಇತರ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು. ಈ ಜಾಹೀರಾತುಗಳಲ್ಲಿ ಹಳೆಯ ದರ ಮತ್ತು ಕಡಿಮೆಯಾದ ಹೊಸ ದರದ ವಿವರಗಳನ್ನು ಸ್ಪಷ್ಟವಾಗಿ ತಿಳಿಸಬೇಕು.
- ದರ ವ್ಯತ್ಯಾಸದ ಮಿತಿ: ಮೂಲ ಚಿಲ್ಲರೆ ಮಾರಾಟ ಬೆಲೆ ಮತ್ತು ಪರಿಷ್ಕೃತ ಬೆಲೆಯ ನಡುವಿನ ವ್ಯತ್ಯಾಸವು ಜಿಎಸ್‌ಟಿ ಕಾಯಿದೆ ಮತ್ತು ನಿಯಮಗಳ ಅನುಷ್ಠಾನದಿಂದ ತೆರಿಗೆಯಲ್ಲಿ ಯಾವುದೇ ಹೆಚ್ಚಳವಾದರೆ, ಆ ಹೆಚ್ಚಳದ ಮೊತ್ತಕ್ಕಿಂತ ಹೆಚ್ಚಿರಬಾರದು. ಹೊಸ ತೆರಿಗೆಯನ್ನು ವಿಧಿಸಿದ್ದರೆ, ಆ ತೆರಿಗೆಯ ಮೊತ್ತಕ್ಕಿಂತ ಹೆಚ್ಚಿರಬಾರದು. ತೆರಿಗೆ ಕಡಿಮೆಯಾದರೆ, ಪರಿಷ್ಕೃತ ಬೆಲೆಯು ತೆರಿಗೆ ಕಡಿತದ ನಂತರದ ಬೆಲೆಗಿಂತ ಹೆಚ್ಚಿರಬಾರದು.
- ಜಾಹೀರಾತು ಕಡ್ಡಾಯ: ತಯಾರಕರು, ಪ್ಯಾಕರ್‌ಗಳು ಅಥವಾ ಆಮದುಕಾರರು ಈ ಬದಲಾವಣೆಯ ಬಗ್ಗೆ ಪತ್ರಿಕೆಗಳು, ಟಿವಿ, ಮತ್ತು ಇತರ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು. ಜೊತೆಗೆ, ಈ ಬದಲಾವಣೆಯನ್ನು ಡೀಲರ್‌ಗಳಿಗೆ, ಕೇಂದ್ರ ಸರ್ಕಾರದ ಕಾನೂನು ಮಾಪನಶಾಸ್ತ್ರ ನಿರ್ದೇಶಕರಿಗೆ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು ಮಾಪನಶಾಸ್ತ್ರ ನಿಯಂತ್ರಕರಿಗೆ ಸೂಚನೆಗಳ ಮೂಲಕ ತಿಳಿಸಬೇಕು.
ಪ್ಯಾಕೇಜಿಂಗ್ ವಸ್ತುಗಳ ಬಳಕೆ:
ಜಿಎಸ್‌ಟಿ ದರ ಪರಿಷ್ಕರಣೆಗೆ ಮೊದಲು ತಯಾರಕರು, ಪ್ಯಾಕರ್‌ಗಳು ಅಥವಾ ಆಮದುಕಾರರು ಬಳಸದೆ ಉಳಿದಿರುವ ಯಾವುದೇ ಪ್ಯಾಕೇಜಿಂಗ್ ವಸ್ತುಗಳು ಅಥವಾ ರ‍್ಯಾಪರ್‌ಗಳನ್ನು 2025ರ ಡಿಸೆಂಬರ್ 31ರವರೆಗೆ ಅಥವಾ ಆ ವಸ್ತುಗಳು ಖಾಲಿಯಾಗುವವರೆಗೆ, ಯಾವುದು ಮೊದಲೋ ಅದು ಜಾರಿಯಲ್ಲಿರುವವರೆಗೆ ಬಳಸಬಹುದು. ಆದರೆ, ಜಿಎಸ್‌ಟಿ ಅನುಷ್ಠಾನದಿಂದಾಗಿ ಚಿಲ್ಲರೆ ಮಾರಾಟ ಬೆಲೆ (ಎಂಆರ್‌ಪಿ)ಯಲ್ಲಿ ಅಗತ್ಯವಾದ ತಿದ್ದುಪಡಿಗಳನ್ನು ಸ್ಟಾಂಪಿಂಗ್, ಸ್ಟಿಕರ್ ಹಾಕುವಿಕೆ ಅಥವಾ ಆನ್‌ಲೈನ್ ಮುದ್ರಣದ ಮೂಲಕ ಮಾಡಬೇಕು.
ಕೇಂದ್ರ ಸರ್ಕಾರದ ಆದೇಶ ಪ್ರತಿ ವೀಕ್ಷಿಸಿಲು ಈ ಲಿಂಕ್ ಕ್ಲಿಕ್ಕಿಸಿ: Permission-to-the-Manufacturers-or-Packerts-or-Importers
ಕೇಂದ್ರ ಸರ್ಕಾರದ ಈ ಕ್ರಮವು ಜಿಎಸ್‌ಟಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ. ಗ್ರಾಹಕ ವ್ಯವಹಾರ ಸಚಿವಾಲಯವು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಒತ್ತಾಯಿಸಿದ್ದು, ಉತ್ಪಾದಕರು ಮತ್ತು ಮಾರಾಟಗಾರರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ. ಈ ಮೂಲಕ ಜನಸಾಮಾನ್ಯರಿಗೆ ಜಿಎಸ್‌ಟಿ ಸುಧಾರಣೆಯ ಲಾಭ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ.