ಬೆಂಗಳೂರು: ಆರ್‌ಎಂಸಿ ಯಾರ್ಡ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಆರ್‌ಆರ್ ನಗರ ಶಾಸಕ ಮುನಿರತ್ನ ಅವರಿಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಕ್ಲೀನ್ ಚಿಟ್ ನೀಡಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎಸ್‌ಐಟಿಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ. ಈ ವರದಿಯು ಶಾಸಕನಿಗೆ ಬಿಗ್ ರಿಲೀಫ್ ನೀಡಿದೆ.
ಪ್ರಕರಣದ ಹಿನ್ನೆಲೆ
ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದಲ್ಲಿ, ಮಹಿಳೆಯೊಬ್ಬರು ಶಾಸಕ ಮುನಿರತ್ನ ಸೇರಿದಂತೆ ಕೆಲವರ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪ ಮಾಡಿದ್ದರು. ಆರೋಪಿಗಳು ತನ್ನನ್ನು ನಿದ್ರೆ ಮಾತ್ರೆಗಳನ್ನು ಸೇವಿಸುವಂತೆ ಒತ್ತಾಯಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆರ್‌ಎಂಸಿ ಯಾರ್ಡ್ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆಯನ್ನು ಎಸ್‌ಐಟಿಗೆ ವಹಿಸಿದ್ದರು. ಆದರೆ, ತನಿಖೆಯ ಸಂದರ್ಭದಲ್ಲಿ ಆರೋಪಗಳಿಗೆ ಸಾಕ್ಷ್ಯಾಧಾರ ದೊರೆಯದಿರುವುದು ಈಗ ಬೆಳಕಿಗೆ ಬಂದಿದೆ.
ಎಸ್‌ಐಟಿಯ ತನಿಖೆಯು ಆರೋಪಿತ ಮಹಿಳೆಯ ದೂರಿನ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿದೆ. ತನಿಖೆಯಲ್ಲಿ, ಮಹಿಳೆಯು ತಾನು ನಿದ್ರೆ ಮಾತ್ರೆ ಸೇವಿಸಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಇದರ ಜೊತೆಗೆ, ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆಯ ದೇಹದಲ್ಲಿ ನಿದ್ರೆ ಮಾತ್ರೆಯ ಯಾವುದೇ ಅಂಶ ಕಂಡುಬಂದಿಲ್ಲ. ಈ ಕಾರಣಗಳಿಂದ, ಆರೋಪಕ್ಕೆ ಯಾವುದೇ ಸಾಕ್ಷ್ಯ ದೊರಕಿಲ್ಲ ಎಂದು ಎಸ್‌ಐಟಿ ತೀರ್ಮಾನಿಸಿದೆ. ಇದರ ಪರಿಣಾಮವಾಗಿ, ಎಸ್‌ಐಟಿಯು ಬಿ ರಿಪೋರ್ಟ್ ಸಲ್ಲಿಸಿ, ಪ್ರಕರಣವನ್ನು ಮುಂದುವರಿಸಲು ಸಾಕ್ಷ್ಯಾಧಾರಗಳಿಲ್ಲ ಎಂದು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ಶಾಸಕ ಮುನಿರತ್ನ ಅವರು ಈ ಆರೋಪವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ ಎಂದು ವಾದಿಸಿದ್ದ ಅವರ ವಕೀಲರು, ಎಸ್‌ಐಟಿಯ ಬಿ ರಿಪೋರ್ಟ್‌ನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ), ಬಿ ರಿಪೋರ್ಟ್‌ನ್ನು ಕೋರ್ಟ್ ಇನ್ನೂ ಅಂಗೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ, ಶಾಸಕನನ್ನು ಬಂಧಿಸದಂತೆ ಹೈಕೋರ್ಟ್‌ನಿಂದ ನೀಡಲಾಗಿದ್ದ ಮಧ್ಯಂತರ ತಡೆಯನ್ನು ವಿಸ್ತರಿಸಲಾಗಿದೆ. ಇದು ಮುನಿರತ್ನಗೆ ಮತ್ತಷ್ಟು ರಿಲೀಫ್ ಸಿಕ್ಕಿದೆ.