ಹಾಸನ: ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯ ಗೌರವಕ್ಕೆ ಆಯ್ಕೆಯಾಗಿರುವ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ, ಕನ್ನಡದ ಹೆಮ್ಮೆಯ ಸಾಹಿತಿ ಭಾನು ಮುಷ್ತಾಕ್ ಅವರಿಗೆ ಕಲಾವಿದೆ ಶಶಿಕಲಾ ಅವರು ಪಾರಂಪರಿಕ ರೀತಿಯಲ್ಲಿ ವಿಶಿಷ್ಟ ಬಾಗಿನ ಅರ್ಪಿಸಿ ಶುಭ ಹಾರೈಸಿದ್ದಾರೆ. ಹಾಸನದಲ್ಲಿರುವ ಭಾನು ಮುಷ್ತಾಕ್ ಮನೆಯಲ್ಲಿ ಬಾಗಿನ ಅರ್ಪಿಸಿದರು.
ಶಶಿಕಲಾ ಅವರು ವಿಶೇಷ ರೀತಿಯಲ್ಲಿ ಸಿದ್ಧಪಡಿಸಿದ ಬಾಗಿನವನ್ನು ಭಾನು ಮುಷ್ತಾಕ್ ಅವರಿಗೆ ಅರ್ಪಿಸಿದ್ದು, ಎಲ್ಲರ ಗಮನ ಸೆಳೆದಿದೆ. ಬಾಗಿನದಲ್ಲಿ ಹಸಿ ಅಕ್ಕಿ, ಅರಿಶಿನ-ಕುಂಕುಮ, ಸಕ್ಕರೆ, ತೆಂಗಿನಕಾಯಿ, ಹಣ್ಣು-ಹೂವು, ಬಳೆ, ಎಲೆ-ಅಡಿಕೆ ಮತ್ತು ಇತರೆ ಸಾಂಪ್ರದಾಯಿಕ ವಸ್ತುಗಳನ್ನು ಒಳಗೊಂಡಿತ್ತು. ಈ ಬಾಗಿನವನ್ನು ಅರ್ಪಿಸುವ ಮೂಲಕ ಶಶಿಕಲಾ ಅವರು ತಮ್ಮ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. “ಈ ಬಾಗಿನದಲ್ಲಿ ನನ್ನ ಹೃದಯದ ಪ್ರೀತಿ, ಕನ್ನಡದ ಕೃತಜ್ಞತೆ ಮತ್ತು ಭಾನು ತಾಯಿಯ ಸಾಧನೆಗೆ ನನ್ನ ಸಣ್ಣ ಹಾರೈಕೆಗಳಿವೆ” ಎಂದು ಶಶಿಕಲಾ ಭಾವುಕರಾಗಿ ಹೇಳಿದರು.
ಅಮ್ಮನ ಮಡಿಲು ಟ್ರಸ್ಟ್‌ನಡಿ ಕಾರ್ಯನಿರ್ವಹಿಸುತ್ತಿರುವ ಕಲಾವಿದೆ ಶಶಿಕಲಾ, ಈ ಕಾರ್ಯಕ್ರಮವನ್ನು ಹಾಸನದಲ್ಲಿರುವ ಭಾನು ಮುಷ್ತಾಕ್ ಅವರ ಮನೆಯಲ್ಲಿ ಆಯೋಜಿಸಿದ್ದರು. “ಸ್ವತಃ ಚಾಮುಂಡೇಶ್ವರಿ ದೇವಿಯೇ ಭಾನು ಅವರನ್ನು ದಸರಾ ಉತ್ಸವಕ್ಕೆ ಕರೆಸಿಕೊಂಡಿರುವಂತಿದೆ. ಇದು ಕೇವಲ ಭಾನು ಅವರಿಗೆ ಸಿಕ್ಕ ಗೌರವವಷ್ಟೇ ಅಲ್ಲ, ಇಡೀ ಕನ್ನಡ ನಾಡಿನ ಮಹಿಳೆಯರಿಗೆ ಸಂದ ಗೌರವ” ಎಂದು ಶಶಿಕಲಾ ತಿಳಿಸಿದರು.
ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಭಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯಕ್ಕೆ ಹೊಸ ಶಕ್ತಿಯನ್ನು ತುಂಬಿದವರು. ಕನ್ನಡದ ಗಡಿಯಿಂದ ಜಗತ್ತಿನಾದ್ಯಂತ ತಮ್ಮ ಬರಹದ ಮೂಲಕ ಬೆಳಕು ಹರಡಿರುವ ಭಾನು ಅವರಿಂದ ದಸರಾ ಮಹೋತ್ಸವ ಉದ್ಘಾಟನೆಯಾಗುವುದು ಕನ್ನಡಿಗರಿಗೆ ಹೆಮ್ಮೆಯ ಕ್ಷಣ. “ಇದು ಕೇವಲ ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ, ಇಡೀ ಕನ್ನಡಿಗರಿಗೆ ಹೆಮ್ಮೆಯ ಸಂಗತಿ” ಎಂದು ಶಶಿಕಲಾ ಹೇಳಿದರು.





