ಬಾಲಿವುಡ್‌ನ ಖ್ಯಾತ ಜೋಡಿಗಳಲ್ಲಿ ಒಂದಾದ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತಮ್ಮ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದನ್ನು ಘೋಷಿಸಿದ್ದಾರೆ. ಈ ಜೋಡಿ ತಮ್ಮ ಮೊದಲ ಮಗುವನ್ನು ಒಟ್ಟಿಗೆ ನಿರೀಕ್ಷಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಂಟಿ ಪೋಸ್ಟ್‌ನ ಮೂಲಕ ತಿಳಿಸಿದ್ದಾರೆ. ಈ ಸಿಹಿ ಸುದ್ದಿಯು ಚಿತ್ರರಂಗದ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಪೋಸ್ಟ್‌ನಲ್ಲಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ, “1+1=3” ಎಂಬ ಕ್ಯಾಪ್ಶನ್ ಬರೆದು, ಸುಂದರವಾದ ಕೇಕ್‌ನಲ್ಲಿ, ಕೆಳಗೆ ಎರಡು ಪುಟ್ಟ ಪಾದಗಳ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ . ಇದರ ಜೊತೆಗೆ, ಈ ದಂಪತಿಗಳು ಕೈಕೈ ಹಿಡಿದು ಹಸಿರು ಉದ್ಯಾನವನದಲ್ಲಿ ನಡೆಯುತ್ತಿರುವ ಸಣ್ಣ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ, “ನಮ್ಮ ಪುಟ್ಟ ಪ್ರಪಂಚ… ಶೀಘ್ರದಲ್ಲೇ ಬರಲಿದೆ 🧿🐣💕 ಅತೀವ ಆಶೀರ್ವಾದಿತರಾಗಿದ್ದೇವೆ” ಎಂದು ಬರೆಯಲಾಗಿದೆ.
ಈ ಪೋಸ್ಟ್‌ನ ಕಾಮೆಂಟ್ ವಿಭಾಗವು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಅಭಿನಂದನೆಗಳಿಂದ ತುಂಬಿಹೋಗಿದೆ. ಎಲ್ಲಾ ಆಪ್ತರು ಶುಭಾಷಯ ಕೋರಿದ್ದಾರೆ.
ಇತ್ತೀಚೆಗೆ ಈ ದಂಪತಿಗಳು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ, ಕಪಿಲ್ ಶರ್ಮಾ, ತಮ್ಮ ತಾಯಿ ಮದುವೆಯಾದ ಕೂಡಲೇ “ಮೊಮ್ಮಕ್ಕಳ ಮೋಡ್”ಗೆ ಹೇಗೆ ಪರಿವರ್ತನೆಯಾದರು ಎಂಬ ತಮಾಷೆಯ ಕಥೆಯನ್ನು ಹಂಚಿಕೊಂಡಿದ್ದರು. ರಾಘವ್ ಚಡ್ಡಾ ತಮಾಷೆಯಾಗಿ, “ನಾವು ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ನೀಡುತ್ತೇವೆ!” ಎಂದು ಹೇಳಿದ್ದರು. ಈ ಹೇಳಿಕೆಯು ಪರಿಣಿತಿಯನ್ನು ಆಶ್ಚರ್ಯಗೊಳಿಸಿತ್ತು ಮತ್ತು ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿತ್ತು.
ಕೆಲ ತಿಂಗಳ ಹಿಂದೆ ನಟಿ ತಾಯಿಯಾಗುವ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ತಮಗೆ ಮಗುವನ್ನು ಹೆರುವುದಕ್ಕಿಂತ ದತ್ತು ತೆಗೆದುಕೊಳ್ಳುವ ಆಸೆ ಇದೆ ಎಂದು ತಿಳಿಸಿದ್ದರು. ಒಂದಲ್ಲ, ಎರಡಲ್ಲ, ಅನೇಕ ಮಕ್ಕಳನ್ನು ದತ್ತು ಪಡೆಯುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದರು. ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, “ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಇಚ್ಛಿಸುತ್ತೇನೆ, ಒಂದಲ್ಲ, ಹಲವು ಮಕ್ಕಳನ್ನು ದತ್ತು ಪಡೆಯಲು ಬಯಸುತ್ತೇನೆ. ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ನನಗೆ ಇಷ್ಟ. ಸಾಕಷ್ಟು ಮಕ್ಕಳನ್ನು ಹೊಂದುವ ಆಸೆ ಇದೆ, ಆದರೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಆದ್ದರಿಂದ ದತ್ತು ತೆಗೆದುಕೊಳ್ಳಲು ನಾನು ಬಯಸುತ್ತೇನೆ,” ಎಂದು ಅವರು ಹೇಳಿದ್ದರು.
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ 2023ರ ಸೆಪ್ಟೆಂಬರ್ 24ರಂದು ಉದಯಪುರದ ದಿ ಲೀಲಾ ಪ್ಯಾಲೇಸ್‌ನಲ್ಲಿ ವಿವಾಹವಾದರು. ಈ ವಿವಾಹವು ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರಿಂದ ಕೂಡಿತ್ತು. ಈ ದಂಪತಿಗಳ ಪ್ರೀತಿಯ ಕತೆಯು ಲಂಡನ್‌ನ ಒಂದು ಕಾರ್ಯಕ್ರಮದಲ್ಲಿ ಆರಂಭವಾಯಿತು, ಅಲ್ಲಿ ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಗೌರವಕ್ಕೆ ಪಾತ್ರರಾಗಿದ್ದರು. ಪರಿಣಿತಿಯ ಪ್ರಕಾರ, ರಾಘವ್‌ನೊಂದಿಗಿನ ಮೊದಲ ಭೇಟಿಯಲ್ಲೇ, ತಾನು ಈ ವ್ಯಕ್ತಿಯನ್ನು ಮದುವೆಯಾಗುವೆ ಎಂದು ತಿಳಿದುಕೊಂಡಿದ್ದೆ ಎಂದು ಅವರು ಒಪ್ಪಿಕೊಂಡಿದ್ದಾರೆ.





