ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ವಿಚಿತ್ರ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಲಡ್ಡು ವಿತರಣೆ ಮಾಡಲಾಗಿತ್ತು. ಆದರೆ, ಗ್ರಾಮಸ್ಥ ಕಮಲೇಶ್ ಕುಶ್ವಾಹ ಎಂಬಾತನಿಗೆ ಕೇವಲ ಒಂದೇ ಲಡ್ಡು ಸಿಕ್ಕಿದ್ದರಿಂದ, ಆತ ಸಿಎಂ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ. “ಎಲ್ಲರಿಗೂ ಎರಡು ಲಡ್ಡು ಕೊಟ್ಟಿದ್ದೀರಿ, ನನಗೇಕೆ ಒಂದೇ?” ಎಂದು ಆತ ಪ್ರಶ್ನಿಸಿದ್ದಾನೆ.
ಕಾರ್ಯಕ್ರಮದಲ್ಲಿ ಧ್ವಜಾರೋಹಣದ ನಂತರ, ಹಾಜರಿದ್ದ ಎಲ್ಲರಿಗೂ ಸಿಹಿತಿಂಡಿಯಾಗಿ ಲಡ್ಡುಗಳನ್ನು ವಿತರಿಸಲಾಗಿತ್ತು. ಆದರೆ, ಕಮಲೇಶ್ ಕುಶ್ವಾಹ ಅವರ ಸರದಿ ಬಂದಾಗ, ಆತನಿಗೆ ಕೇವಲ ಒಂದು ಲಡ್ಡು ನೀಡಲಾಗಿತ್ತು. ಸ್ಥಳದಲ್ಲಿಯೇ ಆತ ಎರಡನೇ ಲಡ್ಡು ಕೇಳಿದ್ದಾನೆ. ಆದರೆ, ಪಂಚಾಯತ್ ಸಿಬ್ಬಂದಿ ಎರಡನೇ ಲಡ್ಡು ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಕಮಲೇಶ್, ಪಂಚಾಯತ್ ಕಟ್ಟಡದ ಹೊರಗೆ ನಿಂತುಕೊಂಡೇ ಮಧ್ಯಪ್ರದೇಶದ ಮುಖ್ಯಮಂತ್ರಿಗಳ ಸಹಾಯವಾಣಿಗೆ ಕರೆ ಮಾಡಿ ತನ್ನ ದೂರನ್ನು ದಾಖಲಿಸಿದ್ದಾನೆ.
ಕಮಲೇಶ್ ಕುಶ್ವಾಹ ತನ್ನ ದೂರಿನಲ್ಲಿ, “ಪಂಚಾಯತ್ ಸಿಹಿತಿಂಡಿಗಳನ್ನು ಸರಿಯಾಗಿ ವಿತರಿಸಲು ವಿಫಲವಾಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದ್ದಾನೆ. ಈ ಘಟನೆಯ ಬಗ್ಗೆ ಪಂಚಾಯತ್ ಕಾರ್ಯದರ್ಶಿ ರವೀಂದ್ರ ಶ್ರೀವಾಸ್ತವ ಮಾತನಾಡಿ, “ಕಮಲೇಶ್ ರಸ್ತೆಯಲ್ಲಿ ನಿಂತಿದ್ದರು. ಆಗ ಪ್ಯೂನ್ ಆತನಿಗೆ ಒಂದು ಲಡ್ಡು ನೀಡಿದ್ದಾನೆ. ಆದರೆ, ಆತ ಎರಡು ಲಡ್ಡು ನೀಡಿ ಎಂದು ಕೇಳಿದ್ದಾನೆ. ಇದಕ್ಕೆ ನಾವು ನಿರಾಕರಿಸಿದಾಗ, ಆತ ಸಿಎಂ ಸಹಾಯವಾಣಿಗೆ ಕರೆ ಮಾಡಿದ್ದಾನೆ” ಎಂದು ತಿಳಿಸಿದ್ದಾರೆ.
ಈ ವಿಚಿತ್ರ ದೂರಿನಿಂದ ಗೊಂದಲಕ್ಕೊಳಗಾದ ಪಂಚಾಯತ್, ಕಮಲೇಶ್‌ನನ್ನು ಸಮಾಧಾನಗೊಳಿಸಲು ಪ್ರಯತ್ನಿಸಿತ್ತು. ಅವರಿಗಾಗಿ ಮಾರುಕಟ್ಟೆಯಿಂದ ಒಂದು ಕೆಜಿ ಸಿಹಿತಿಂಡಿಗಳನ್ನು ಖರೀದಿಸಿ ನೀಡಲಾಯಿತು. ಈ ಘಟನೆ ಗ್ರಾಮದಲ್ಲಿ ಹಾಸ್ಯಾಸ್ಪದ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ವಿಷಯ ಭಾರೀ ಗಮನ ಸೆಳೆದಿದೆ.





