ನವದೆಹಲಿ (ಜುಲೈ 31): ಸಾಮಾಜಿಕ ಜಾಲತಾಣ ಸಂಸ್ಥೆಯಾದ ಮೆಟಾ ಕಂಪನಿಯು ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ಪೋಸ್ಟ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮೆಟಾ (Meta) ಸಂಸ್ಥೆಗೆ ಸಮನ್ಸ್ ಜಾರಿಗೊಳಿಸಿದೆ. ಮೆಟಾದ ಜಾಗತಿಕ ತಂಡವನ್ನು ದೆಹಲಿಗೆ ಕರೆಸಿ, ಅಲ್ಗಾರಿದಮ್ ಕಾರ್ಯವೈಖರಿ, ಪಕ್ಷಪಾತದ ಆರೋಪಗಳು ಹಾಗೂ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವಲ್ಲಿ ಸಂಸ್ಥೆಯ ಪಾತ್ರದ ಕುರಿತು ವಿವರವಾದ ಸ್ಪಷ್ಟೀಕರಣ ಪಡೆಯಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಮುಂದಿನ ವಾರ ಮೆಟಾದ ಜಾಗತಿಕ ಅಧಿಕಾರಿಗಳು ದೆಹಲಿಗೆ ಆಗಮಿಸುವ ನಿರೀಕ್ಷೆಯಿದ್ದು, ಅವರು ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆಗೆ ಸಂಸದೀಯ ಸಮಿತಿಯ ಮುಂದೆಯೂ ಹಾಜರಾಗಿ ಉತ್ತರ ನೀಡಲಿದ್ದಾರೆ.
ಏನಿದು ವಿವಾದ?
ಭಾರತದ ಯುವಜನತೆಯನ್ನು ಉದ್ದೇಶಿಸಿ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಪೋಸ್ಟ್‌ನ್ನು ಫೇಸ್‌ಬುಕ್ ಮೆಟಾ ಕೆಲಕಾಲ ನಿರ್ಬಂಧಿಸಿತ್ತು. ಬಳಿಕ ಈ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು.
ಈ ಕುರಿತು ಮೆಟಾ, ಇದು ತಾಂತ್ರಿಕ ದೋಷ (Technical Glitch) ದಿಂದ ಸಂಭವಿಸಿದೆ ಎಂದು ಹೇಳಿ ಕ್ಷಮೆಯಾಚಿಸಿತ್ತು. ಆದರೆ ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಸ್ಪಷ್ಟನೆಯನ್ನು ಸಮರ್ಪಕವಲ್ಲ ಎಂದು ತಳ್ಳಿಹಾಕಿ ಹೆಚ್ಚಿನ ವಿವರಣೆ ಕೋರಿದೆ ಎಂದು ವರದಿಗಳು ತಿಳಿಸಿದೆ.
ಮೆಟಾದಿಂದ ಸರ್ಕಾರಕ್ಕೆ ಪತ್ರ
ವಿವಾದದ ಬಳಿಕ ಮೆಟಾ ಸಂಸ್ಥೆ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದು, ಪ್ರಧಾನಿ ಮೋದಿ ಸೇರಿದಂತೆ ದೇಶದ ಪ್ರಮುಖ ಸಾರ್ವಜನಿಕ ವ್ಯಕ್ತಿಗಳ ಖಾತೆಗಳ ಪೋಸ್ಟ್‌ಗಳ ಮೇಲೆ ಹೆಚ್ಚುವರಿ ನಿಗಾ ಮತ್ತು ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದೆ. ಪ್ರಮುಖ ಖಾತೆಗಳ ವಿಷಯಗಳು ತಪ್ಪಾಗಿ ನಿರ್ಬಂಧಗೊಳ್ಳದಂತೆ ವಿಶೇಷ ಸುರಕ್ಷತಾ ವ್ಯವಸ್ಥೆ ಜಾರಿಯಲ್ಲಿದೆ ಎಂದು ಸಂಸ್ಥೆ ವಿವರಿಸಿದೆ.
ಹೈದರಾಬಾದ್‌ನಲ್ಲಿ ಪ್ರಕರಣ
ಇದೇ ವೇಳೆ, ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಎಐ ತಂತ್ರಜ್ಞಾನ ಬಳಸಿ ತಿರುಚಿದ ವಿಡಿಯೋ ಹಾಗೂ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನ ಕೆಲವು ಖಾತೆಗಳ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.





