ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದ ಸಿಎಂ ಕಚೇರಿಯಲ್ಲಿ ನೇರವಾಗಿ ಭೇಟಿಯಾಗಿ ರಾಜೀನಾಮೆ ಪತ್ರ ಹಸ್ತಾಂತರಿಸಿದ್ದಾರೆ.
ಮೂಲಗಳ ಪ್ರಕಾರ, ಈ ನಿರ್ಧಾರ ಹೈಕಮಾಂಡ್ ಸೂಚನೆ ಮೇರೆಗೆ ಕೈಗೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ರಾಜಣ್ಣ ಮತ್ತು ಸರ್ಕಾರದ ಉನ್ನತ ಮಟ್ಟದ ನಾಯಕರ ನಡುವೆ ರಾಜಕೀಯ ಚರ್ಚೆಗಳು ನಡೆಯುತ್ತಿದ್ದು, ಸಚಿವ ಸ್ಥಾನ ತ್ಯಾಗದ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಇಂದು ಬೆಳಿಗ್ಗೆ ನಡೆದ ಈ ಬೆಳವಣಿಗೆಯಿಂದಾಗಿ ಆ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜಣ್ಣ ನಡುವೆ ಕೆಲಕಾಲ ಮಾತುಕತೆ ನಡೆಯಿತು. ರಾಜಣ್ಣ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದು, ನಂತರ ತಕ್ಷಣವೇ ಮುಖ್ಯಮಂತ್ರಿ ಅದನ್ನು ಸ್ವೀಕರಿಸಿದ್ದಾರೆ.
ರಾಜೀನಾಮೆ ಸ್ವೀಕರಿಸಿದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಿಎಸ್ ಡಾ. ವೆಂಕಟೇಶಯ್ಯ ಅವರೊಂದಿಗೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಜಣ್ಣ ರಾಜೀನಾಮೆಯಿಂದ ಉಂಟಾಗುವ ರಾಜಕೀಯ ಪರಿಣಾಮಗಳ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆ ಇದೆ. ನಂತರ, ಅಧಿಕೃತವಾಗಿ ರಾಜಣ್ಣ ರಾಜೀನಾಮೆ ಅಂಗೀಕಾರದ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರದಲ್ಲೇ ರಾಜ್ಯಪಾಲರಿಗೆ ರಾಜಣ್ಣ ರಾಜೀನಾಮೆ ಅಂಗೀಕಾರದ ಅಧಿಕೃತ ಪತ್ರವನ್ನು ರವಾನಿಸಲಿದ್ದಾರೆ. ಇದರೊಂದಿಗೆ ಸಚಿವ ಸಂಪುಟದಲ್ಲಿ ಮತ್ತೊಂದು ಖಾಲಿ ಸ್ಥಾನ ಉಂಟಾಗಲಿದೆ. ಮುಂದಿನ ದಿನಗಳಲ್ಲಿ ಈ ಸ್ಥಾನಕ್ಕೆ ಯಾರನ್ನು ಒಳಪಡಿಸಬಹುದು ಎಂಬುದರ ಬಗ್ಗೆ ಊಹಾಪೋಹಗಳು ಈಗಲೇ ಆರಂಭಗೊಂಡಿವೆ.