ಕಿರುತೆರೆಯ ವಿವಿಧ ವಿಭಾಗಗಳಲ್ಲಿ ವೃತ್ತಿಪರ ಅನುಭವ ಹೊಂದಿರುವ ಅಭಿಜಿತ್ ಪುರೋಹಿತ್ ಕಳೆದ ವರ್ಷ “ಲಕ್ಷ್ಮಿ” ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಈ ಕಿರುಚಿತ್ರವು ದೇಶ-ವಿದೇಶಗಳ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ, ಅಭಿನಯ, ನಿರ್ದೇಶನ, ಸಂಗೀತ, ಛಾಯಾಗ್ರಹಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ 26 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಈ ಯಶಸ್ಸಿನ ಸಂಭ್ರಮವನ್ನು ಹಂಚಿಕೊಳ್ಳಲು ನಿರ್ದೇಶಕ ಅಭಿಜಿತ್ ಪುರೋಹಿತ್ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ, ತನ್ನ ತಾಯಿ ನಳಿನಿ ಅವರ ಮೇಲಿನ ಅಪಾರ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುವ ನಿಮಿತ್ತ, ಅಭಿಜಿತ್ ತಾಯಿಯ 70ನೇ ಹುಟ್ಟುಹಬ್ಬವನ್ನು “ನಳಿನಿ at 70: ಅಡುಗೆ ಮನೆಯಿಂದ ರೆಡ್ ಕಾರ್ಪೆಟ್ ವರೆಗೆ” ಎಂಬ ಶೀರ್ಷಿಕೆಯಡಿ ಅರ್ಥಪೂರ್ಣವಾಗಿ ಆಚರಿಸಿದರು. ಎಐ ತಂತ್ರಜ್ಞಾನವನ್ನು ಬಳಸಿ, ನಳಿನಿ ಅವರ ಪತಿ, ತಂದೆ ಮತ್ತು ತಾಯಿ ಶುಭಾಶಯ ಕೋರುವ ವಿಡಿಯೋವನ್ನು ತೋರಿಸಿದರು. ಈ ಅನಿರೀಕ್ಷಿತ ಆಶ್ಚರ್ಯವನ್ನು ಕಂಡು ನಳಿನಿ ಅವರ ಕಣ್ಣೀರು ಆನಂದಭಾಷ್ಪದಿಂದ ತುಂಬಿತು.
ವೇದಿಕೆಯಲ್ಲಿ ಮಾತನಾಡಿದ ಅಭಿಜಿತ್, ಈ ಸಮಾರಂಭಕ್ಕೆ ಗಿರಿಜಮ್ಮ ಅವರೇ ಸೂಕ್ತ ವ್ಯಕ್ತಿ ಎಂದು ಆಹ್ವಾನಿಸಿದರು. “ನನ್ನ ‘ಲಕ್ಷ್ಮಿ’ ಕಿರುಚಿತ್ರ 26 ಪ್ರಶಸ್ತಿಗಳನ್ನು ಗಳಿಸಿದೆ. ಇದಕ್ಕೆ ಮಾಧ್ಯಮದವರ ಸಹಕಾರವೇ ಕಾರಣ. ನಮ್ಮ ಅಮ್ಮನ 70ನೇ ಹುಟ್ಟುಹಬ್ಬಕ್ಕೆ ಅವರ ಕಟೌಟ್ ತಯಾರಿಸಿದ್ದೇನೆ. ಒಬ್ಬ ಮಗನಾಗಿ, 40 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಅವರ ತಂದೆ, ತಾಯಿ ಮತ್ತು ಪತಿಯನ್ನು ಎಐ ಮೂಲಕ ತೋರಿಸಿದ್ದೇನೆ,” ಎಂದರು. ಈ ಸಂದರ್ಭದಲ್ಲಿ ತಾಯಿಗೆ ಅವರ ತಂದೆಯ ವಿಗ್ರಹವನ್ನು ಕೊಡುಗೆಯಾಗಿ ನೀಡಿದರು.
ತನ್ನ ಮಗನ ಪ್ರೀತಿಗೆ ಭಾವುಕರಾದ ನಳಿನಿ, “ನನ್ನ ಮಗ ನನಗೆ ಪ್ರಶಸ್ತಿ, ಗೌರವ ಎಲ್ಲವನ್ನೂ ತಂದುಕೊಟ್ಟ. ಗಂಡ, ತಂದೆ, ತಾಯಿಯನ್ನು ತೋರಿಸಿದ. ಇಂತಹ ಮಗನನ್ನು ಪಡೆದಿದ್ದಕ್ಕೆ ನಾನು ಅದೃಷ್ಟವಂತೆ,” ಎಂದರು.
ಗಿರಿಜಾ ಲೋಕೇಶ್ ವೇದಿಕೆಯಲ್ಲಿ ಮಾತನಾಡುತ್ತ, “ಇಂತಹ ಮಗ ಎಲ್ಲ ತಾಯಂದಿರಿಗೂ ಸಿಗುವುದಿಲ್ಲ. ತನ್ನ ತಾಯಿಗೆ ಆತ ಅದ್ಭುತವಾದ ಆಶ್ಚರ್ಯವನ್ನು ನೀಡಿದ್ದಾನೆ. ಈಗ ನಳಿನಿ ಅವರು ಸ್ಟಾರ್ ಆಗಿದ್ದಾರೆ. ನಾನು ‘ಲಕ್ಷ್ಮಿ’ ಚಿತ್ರವನ್ನು ನೋಡಿದೆ; 20 ನಿಮಿಷಗಳಲ್ಲಿ ಎಂತಹ ವಿಷಯವನ್ನು ತಿಳಿಸಿದ್ದಾನೆ! ತನ್ನ ಮನೆಯ ಜೊತೆಗೆ ಸಂಬಂಧಗಳನ್ನೂ ಉಳಿಸಿಕೊಂಡಿದ್ದಾನೆ,” ಎಂದರು.
ಚಿತ್ರದಲ್ಲಿ ನಟಿಸಿದ್ದ ಪದ್ಮಜಾರಾವ್, “ಇಂತಹ ಮಹತ್ವದ ಪಾತ್ರವನ್ನು ನನಗೆ ನೀಡಿದ್ದಕ್ಕೆ ಅಭಿಜಿತ್ ಕಾರಣ. ಈ ಚಿತ್ರಕ್ಕೆ ಪ್ರಶಸ್ತಿಯೂ ಸಿಕ್ಕಿದೆ,” ಎಂದರು. ನಿರ್ದೇಶಕ ರಘುರಾಮ್ ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ಸಂಗೀತ ನಿರ್ದೇಶಕ ಗಿರಿಧರ ದೀವಾನ್ ಕೂಡ ವೇದಿಕೆಯಲ್ಲಿದ್ದರು. ಈ ಕಾರ್ಯಕ್ರಮಕ್ಕೆ ಎಲ್ಲ ತಾಯಂದಿರನ್ನೂ ಆಹ್ವಾನಿಸಲಾಗಿತ್ತು.





