ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಕೀಟನಾಶಕ ಸುರಿದ ಘಟನೆಯಲ್ಲಿ ಶ್ರೀರಾಮ ಸೇನೆಯ ಸವದತ್ತಿ ತಾಲೂಕಾಧ್ಯಕ್ಷ ಸೇರಿ ಮೂವರು ಆರೋಪಿಗಳನ್ನು ಸವದತ್ತಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ. ಈ ಘಟನೆ ಜುಲೈ 14ರಂದು ನಡೆದಿದ್ದು, ವಿಷ ಮಿಶ್ರಿತ ನೀರು ಕುಡಿದ 11 ಮಕ್ಕಳು ಅಸ್ವಸ್ಥರಾಗಿದ್ದರು.
ಬಂಧಿತ ಆರೋಪಿಗಳನ್ನು ಸಾಗರ ಪಾಟೀಲ (29), ಕೃಷ್ಣ ಯಮನಪ್ಪ ಮಾದರ (26), ಮತ್ತು ನಾಗನಗೌಡ ಬಸಪ್ಪ ಪಾಟೀಲ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದಾರೆ. ತನಿಖೆಯಿಂದ ಆರೋಪಿಗಳು ಶಾಲೆಯ ಮುಖ್ಯ ಶಿಕ್ಷಕ ಸುಲೇಮಾನ್ ಗೋರಿನಾಯ್ಕ, ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಆತನನ್ನು ಶಾಲೆಯಿಂದ ವರ್ಗಾವಣೆ ಮಾಡಿಸುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಆರೋಪಿ ಸಾಗರ ಪಾಟೀಲ, ಶ್ರೀರಾಮ ಸೇನೆಯ ಸವದತ್ತಿ ತಾಲೂಕಾಧ್ಯಕ್ಷನಾಗಿದ್ದು, ಕೃಷ್ಣ ಮಾದರನನ್ನು ಬ್ಲಾಕ್‌ಮೇಲ್ ಮಾಡಿ ಕೃತ್ಯಕ್ಕೆ ಪ್ರೇರೇಪಿಸಿದ್ದಾನೆ. ಕೃಷ್ಣ ಮಾದರ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯವನ್ನು ಬಹಿರಂಗಪಡಿಸುವುದಾಗಿ ಸಾಗರ ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡ ಕೃಷ್ಣ, ಸಾಗರನ ಸೂಚನೆಯಂತೆ ಮುನವಳ್ಳಿಯಿಂದ ಕೀಟನಾಶಕ ತಂದು ನೀರಿನ ಟ್ಯಾಂಕ್‌ಗೆ ಬೆರೆಸಲು ಒಪ್ಪಿಕೊಂಡಿದ್ದ.
ಈ ಕೃತ್ಯಕ್ಕೆ ಶಾಲೆಯ ಒಬ್ಬ ಅಮಾಯಕ ಬಾಲಕನನ್ನು ಬಳಸಿಕೊಳ್ಳಲಾಗಿತ್ತು. ಆರೋಪಿಗಳು ಬಾಲಕನಿಗೆ ಚಾಕೊಲೇಟ್, ಕುರುಕುರೆ, ಮತ್ತು 500 ರೂಪಾಯಿ ನಗದು ನೀಡಿ, ಕೀಟನಾಶಕವನ್ನು ಟ್ಯಾಂಕ್‌ಗೆ ಸುರಿಯುವಂತೆ ಪ್ರಚೋದಿಸಿದ್ದರು. ಬಾಲಕ ಆಮಿಷಕ್ಕೆ ಒಳಗಾಗಿ ವಿಷವನ್ನು ಟ್ಯಾಂಕ್‌ಗೆ ಬೆರೆಸಿ, ಬಾಟಲಿಯನ್ನು ಅಲ್ಲಿಯೇ ಎಸೆದಿದ್ದ.
ತನಿಖೆಯ ಸಂದರ್ಭದಲ್ಲಿ ಈ ಎಲ್ಲಾ ವಿವರಗಳು ಬೆಳಕಿಗೆ ಬಂದಿದ್ದು, ಸವದತ್ತಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ ತನಿಖೆ ಮುಂದುವರಿಯುತ್ತಿದೆ ಎಂದು ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.





