ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ (Dharmasthala Burial Case), ಬೆಂಗಳೂರು ನಗರ ಸಿವಿಲ್ ಕೋರ್ಟ್ ಜುಲೈ 18ರಂದು ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ಆಡಳಿತಗಾರರ ಕುಟುಂಬ ಮತ್ತು ದೇವಸ್ಥಾನದ ವಿರುದ್ಧ “ಮಾನಹಾನಿಕರ ವಿಷಯ”ವನ್ನು ಪ್ರಕಟಿಸದಂತೆ 390 ಮಾಧ್ಯಮ ಸಂಸ್ಥೆಗಳಿಗೆ ಏಕಪಕ್ಷೀಯ ತಡೆಯಾಜ್ಞೆಯನ್ನು ವಿಧಿಸಿತ್ತು. ಆದರೆ, ಈ ಆದೇಶವನ್ನು ಕೆಲವು ಮಾಧ್ಯಮಗಳು ಪದೇ ಪದೇ ಉಲ್ಲಂಘಿಸಿವೆ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠವು ನಿನ್ನೆ (ಜುಲೈ 29) ಕಿಡಿಕಾರಿತು.
ಕುಡ್ಲ ರ‍್ಯಾಂಪೇಜ್ ಎಂಬ ಯೂಟ್ಯೂಬ್ ಚಾನಲ್‌ನ ಮುಖ್ಯ ಸಂಪಾದಕ ಅಜಯ್ ಬಿನ್ ರಾಮಕೃಷ್ಣ ಪೂಜಾರಿ (32) ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಪೀಠವು, “ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವವರ ಅರ್ಜಿಯನ್ನು ಪರಿಗಣಿಸಬೇಕೆಂದು ನೀವು ಹೇಗೆ ಭಾವಿಸುತ್ತೀರಿ? ತಡೆಯಾಜ್ಞೆ ಇದ್ದರೂ ಚಾನಲ್‌ಗಳನ್ನು ತೆರೆಯುತ್ತಿರುವಿರಿ,” ಎಂದು ಕುಡ್ಲ ರ‍್ಯಾಂಪೇಜ್‌ನ ವಕೀಲ ಎ. ವೇಲನ್ ಅವರನ್ನು ಪ್ರಶ್ನಿಸಿತು. ಈ ಅರ್ಜಿಯ ಕಾನೂನುಬದ್ಧತೆಯ ಕುರಿತು ತೀರ್ಪನ್ನು ಆಗಸ್ಟ್ 1ರೊಳಗೆ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತು.
ವೇಲನ್ ಅವರು, “ಈ ತಡೆಯಾಜ್ಞೆಯು ಸಂವಿಧಾನದ 19(1)(ಎ)ನೇ ವಿಧಿಯಡಿ ಮಾಧ್ಯಮದ ಮಾತಿನ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಯ ಪತ್ರಿಕೋದ್ಯಮದ ಮೇಲೆ ‘ಚಿಲ್ಲಿಂಗ್ ಎಫೆಕ್ಟ್’ ಉಂಟುಮಾಡುವ ಪೂರ್ವನಿರ್ಬಂಧವಾಗಿದೆ,” ಎಂದು ವಾದಿಸಿದರು. ಈ ಪ್ರಕರಣದಲ್ಲಿ ಮಾಧ್ಯಮ ವರದಿಗಳು ರಾಜ್ಯ ಸರ್ಕಾರವನ್ನು ವಿಶೇಷ ತನಿಖಾ ತಂಡ (SIT) ರಚಿಸಲು ಪ್ರೇರೇಪಿಸಿತು ಎಂದು ಅವರು ಒತ್ತಿ ಹೇಳಿದರು. ಆದರೆ, ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರ ಪರ ವಕೀಲ ಉದಯ್ ಹೊಳ್ಳ, “ಮಾನಹಾನಿಯು ಸಂವಿಧಾನದ 21ನೇ ವಿಧಿಯಡಿ ವ್ಯಕ್ತಿಯ ಘನತೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಸುಪ್ರೀಂ ಕೋರ್ಟ್ ತೀರ್ಪುಗಳ ಆಧಾರದ ಮೇಲೆ ಈ ತಡೆಯಾಜ್ಞೆಯನ್ನು ವಿಧಿಸಲಾಗಿದೆ,” ಎಂದು ವಾದಿಸಿದರು.
ಧರ್ಮಸ್ಥಳದಲ್ಲಿ 1995ರಿಂದ 2014ರವರೆಗೆ ನೂರಾರು ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿಟ್ಟಿದ್ದೇನೆ ಎಂದು ದೂರಿದ 48 ವರ್ಷದ ದಲಿತ ಸ್ವಚ್ಛತಾ ಕಾರ್ಮಿಕನ ಹೇಳಿಕೆಯಿಂದ ಈ ಪ್ರಕರಣ ಆರಂಭವಾಯಿತು. ಈತನ ಗುರುತನ್ನು ಕೋರ್ಟ್ ರಕ್ಷಣೆಯಡಿ ಗೌಪ್ಯವಾಗಿಡಲಾಗಿದೆ. ಜುಲೈ 11ರಂದು ಬೆಳ್ತಂಗಡಿಯ ಕೋರ್ಟ್‌ನಲ್ಲಿ ಈತನ ಹೇಳಿಕೆಯನ್ನು ದಾಖಲಿಸಲಾಯಿತು. ಈತ 13 ಸ್ಥಳಗಳನ್ನು ಗುರುತಿಸಿದ್ದು, SIT ನೇತೃತ್ವದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ಜುಲೈ 29ರಿಂದ ಆರಂಭವಾಗಿದೆ. ಆದರೆ, ಮೊದಲ ದಿನದ ಶೋಧದಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ. ಕಾಡು ಸಂರಕ್ಷಿತ ಪ್ರದೇಶವಾದ ಕಾರಣ, ಯಂತ್ರಗಳ ಬಳಕೆ ಸೀಮಿತವಾಗಿದ್ದು, ಇಂದು ಸಹ ಮಾನವ ಶ್ರಮದಿಂದಲೇ ಶೋಧ ಕಾರ್ಯ ನಡೆಯುತ್ತಿದೆ.