ಶಿವಮೊಗ್ಗ: ಸಾಲದ ಕಂತು ಕಟ್ಟುವ ವಿಚಾರಕ್ಕೆ ದಂಪತಿಯ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಆಘಾತಕಾರಿ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಈ ಘಟನೆಯಲ್ಲಿ ಪತಿ ವಿಜಯ್ ತನ್ನ ಪತ್ನಿ ವಿದ್ಯಾ (30) ಅವರ ಮೂಗನ್ನು ಹಲ್ಲಿನಿಂದ ಕಚ್ಚಿ ತುಂಡರಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಚೆನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಜುಲೈ 8ರಂದು, ಮಂಟರಘಟ್ಟ ಗ್ರಾಮದ ದಂಪತಿ ವಿಜಯ್ ಮತ್ತು ವಿದ್ಯಾ ನಡುವೆ ಸಾಲದ ಕಂತು ಕಟ್ಟುವ ವಿಷಯವನ್ನು ಕುರಿತು ತೀವ್ರ ಗಲಾಟೆ ಉಂಟಾಯಿತು. ವಾದ-ವಿವಾದದ ವೇಳೆ ವಿಜಯ್, ವಿದ್ಯಾಳನ್ನು ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿದ ಸಂದರ್ಭದಲ್ಲಿ ವಿದ್ಯಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ವಿಜಯ್, ಕೋಪದಿಂದ ವಿದ್ಯಾ ಮೂಗನ್ನು ಹಲ್ಲಿನಿಂದ ಕಚ್ಚಿ, ಮೂಗಿನ ಮುಂಭಾಗವನ್ನು ಸಂಪೂರ್ಣವಾಗಿ ತುಂಡರಿಸಿದ್ದಾನೆ. ಈ ಘಟನೆಯಿಂದ ಗಾಯಗೊಂಡ ವಿದ್ಯಾರನ್ನು ಸ್ಥಳೀಯರು ತಕ್ಷಣವೇ ಚೆನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದುದ್ದರು. ಅವರಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ವಿದ್ಯಾ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯ ಬಗ್ಗೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಮೆಡಿಕಲ್ ಲೀಗಲ್ ಕೇಸ್ (ಎಂಎಲ್‌ಸಿ) ದಾಖಲಾಗಿದೆ. ಆದರೆ, ಘಟನೆಯು ಚೆನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ನಡೆದಿರುವುದರಿಂದ, ದೂರು ಚೆನ್ನಗಿರಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ವಿದ್ಯಾ ಅವರ ದೂರಿನ ಆಧಾರದ ಮೇಲೆ ಚೆನ್ನಗಿರಿ ಠಾಣೆಯಲ್ಲಿ ವಿಜಯ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.