ಜೈಪುರ: ಲಿವ್ ಇನ್ ರಿಲೇಶನ್ ಈಗಿನ ಯುವ ಜನರಲ್ಲಿ ಸಾಮಾನ್ಯವಾದರೂ, ರಾಜಸ್ಥಾನದ ಒಂದು ಜೋಡಿಯ ಅಪರೂಪದ ಕತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 70 ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ನಲ್ಲಿ ಜೀವನ ಸಾಗಿಸಿದ ಈ ಜೋಡಿ, 95 ಮತ್ತು 90 ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಜಸ್ಥಾನದ ಡುಂಗರಪುರ ಜಿಲ್ಲೆಯ ಗಾಲಂದರ್ ಗ್ರಾಮದ ರಾಮ ಅಂಗರಿ (95) ಮತ್ತು ಜೀವಲಿ ದೇವಿ (90) ಈ ಅಪರೂಪದ ಜೋಡಿಯಾಗಿದ್ದಾರೆ. ಒಂದೇ ಮನೆಯಲ್ಲಿ 70 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ ಈ ಜೋಡಿಗೆ 4 ಗಂಡು ಮತ್ತು 4 ಹೆಣ್ಣು ಮಕ್ಕಳಿದ್ದಾರೆ, ಇವರ ಪೈಕಿ ನಾಲ್ವರು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಮದುವೆಯಾಗದೇ ಜೀವನ ಸಾಗಿಸಿದ್ದ ಈ ಜೋಡಿಯ ಕನಸನ್ನು ಅವರ ಮಕ್ಕಳು ಅದ್ಧೂರಿಯಾಗಿ ನೆರವೇರಿಸಿದ್ದಾರೆ.
ಮಕ್ಕಳು, ಮೊಮ್ಮಕ್ಕಳು ಮತ್ತು ಗ್ರಾಮಸ್ಥರೆಲ್ಲರೂ ಈ ವಿಶಿಷ್ಟ ಮದುವೆಯಲ್ಲಿ ಭಾಗವಹಿಸಿದ್ದಾರೆ. ಯುವ ಜೋಡಿಗಳ ವಿವಾಹದಂತೆ ಹಳದಿ, ಮೆಹಂದಿ, ಬಿಂದೋರಿಯಂತಹ ಎಲ್ಲಾ ಸಂಪ್ರದಾಯಿಕ ಆಚರಣೆಗಳನ್ನು ನಡೆಸಲಾಯಿತು. ಮದುವೆಯ ಸಂಭ್ರಮದಲ್ಲಿ ಡಿಜೆ ಕಾರ್ಯಕ್ರಮವೂ ಆಯೋಜನೆಗೊಂಡಿದ್ದು, ಮಕ್ಕಳು, ಮೊಮ್ಮಕ್ಕಳು ಮತ್ತು ಗ್ರಾಮಸ್ಥರು ಉತ್ಸಾಹದಿಂದ ಕುಣಿದು ಕುಪ್ಪಳಿಸಿದ್ದಾರೆ. ಈ ಅಪರೂಪದ ಮದುವೆಯು ಇಡೀ ಗಾಲಂದರ್ ಗ್ರಾಮವನ್ನೇ ಸಂಭ್ರಮದಲ್ಲಿ ತೇಲಾಡುವಂತೆ ಮಾಡಿತು.
ಈ ಘಟನೆಯಿಂದ ಲಿವ್ ಇನ್ ರಿಲೇಶನ್‌ಗೆ ಹೊಸ ಆಯಾಮ ಸಿಕ್ಕಿದ್ದು, ಪ್ರೀತಿಯ ಸಾಮಾಜಿಕ ಮಾನ್ಯತೆಗಿಂತ ಬಲವಾಗಿರುವುದನ್ನು ಈ ಜೋಡಿ ತೋರಿಸಿದೆ. ಈ ಜೋಡಿಯ ಕತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಎಲ್ಲರಿಗೂ ಸ್ಫೂರ್ತಿಯಾಗಿದೆ.