ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2025ರ ಪ್ಲೇಆಫ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೋಲುಣಿಸಿ ಫೈನಲ್‌ಗೆ ಪ್ರವೇಶಿಸಿದೆ. 18 ವರ್ಷಗಳಿಂದ ಟ್ರೋಫಿಗಾಗಿ ಕಾಯುತ್ತಿರುವ ಆರ್‌ಸಿಬಿ ಅಭಿಮಾನಿಗಳ ಕನಸು ಈಗ ಒಂದು ಹೆಜ್ಜೆ ದೂರದಲ್ಲಿದೆ. ಈ ಸಂತಸದ ಸಂದರ್ಭದಲ್ಲಿ, ಬೆಳಗಾವಿಯ ಗೋಕಾಕ್‌ನ ಯುವಕನೊಬ್ಬ ಆರ್‌ಸಿಬಿ ಐಪಿಎಲ್ ಕಪ್ ಗೆದ್ದರೆ ಆ ದಿನವನ್ನು ‘ಆರ್‌ಸಿಬಿ ಫ್ಯಾನ್ಸ್ ಹಬ್ಬ’ವೆಂದು ಘೋಷಿಸಿ ರಾಜ್ಯಾದ್ಯಂತ ರಜೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಶಿವಾನಂದ ಮಲ್ಲಣ್ಣವರ್ ಎಂಬ ಯುವಕ ಈ ವಿಶೇಷ ಮನವಿಯನ್ನು ಸಿಎಂಗೆ ಸಲ್ಲಿಸಿದ್ದಾನೆ. ಆರ್‌ಸಿಬಿ ಕಪ್ ಗೆದ್ದ ದಿನವನ್ನು ಪ್ರತಿ ವರ್ಷ ‘ಕರ್ನಾಟಕ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ’ವಾಗಿ ಆಚರಿಸಲು ಮತ್ತು ರಾಜ್ಯವ್ಯಾಪಿ ರಜೆ ಘೋಷಿಸಲು ಅವರು ಒತ್ತಾಯಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್‌ಸಿಬಿ ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಶಿವಾನಂದ ಅವರ ಪತ್ರದಲ್ಲಿ, “ಆರ್‌ಸಿಬಿ ಐಪಿಎಲ್ ಫೈನಲ್‌ನಲ್ಲಿ ಕಪ್ ಗೆದ್ದರೆ, ಆ ದಿನವನ್ನು ಕರ್ನಾಟಕ ರಾಜ್ಯದಲ್ಲಿ ‘ಆರ್‌ಸಿಬಿ ಫ್ಯಾನ್ಸ್ ಹಬ್ಬ’ವಾಗಿ ಘೋಷಿಸಬೇಕು. ಕರ್ನಾಟಕ ರಾಜ್ಯೋತ್ಸವದಂತೆ ಎಲ್ಲ ಜಿಲ್ಲೆಗಳಲ್ಲಿ ಈ ದಿನವನ್ನು ಆಚರಿಸಲು ಸರ್ಕಾರ ಅನುವು ಮಾಡಿಕೊಡಬೇಕು. ಇದು ಲಕ್ಷಾಂತರ ಆರ್‌ಸಿಬಿ ಅಭಿಮಾನಿಗಳ ಬಹುಕಾಲದ ಕನಸಿನ ಗೆಲುವಿನ ಆಚರಣೆಯಾಗಲಿದೆ,” ಎಂದು ತಿಳಿಸಿದ್ದಾರೆ. ಈ ಘೋಷಣೆಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ, ರಜೆ ಮತ್ತು ಹಬ್ಬದ ಆಚರಣೆಗೆ ಅನುಮತಿ ನೀಡಬೇಕೆಂದು ಎಲ್ಲ ಆರ್‌ಸಿಬಿ ಅಭಿಮಾನಿಗಳ ಪರವಾಗಿ ಕಳಕಳಿಯ ಮನವಿ ಮಾಡಿದ್ದಾರೆ.
ಈ ಮನವಿಯು ಕರ್ನಾಟಕದ ಆರ್‌ಸಿಬಿ ಅಭಿಮಾನಿಗಳ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಆರ್‌ಸಿಬಿ ತಂಡದ ಈ ಐತಿಹಾಸಿಕ ಫೈನಲ್ ಪ್ರವೇಶವು ರಾಜ್ಯದಾದ್ಯಂತ ಸಂತಸದ ವಾತಾವರಣ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ #RCBFansDay ಎಂಬ ಚರ್ಚೆ ಜೋರಾಗಿದ್ದು, ಶಿವಾನಂದ ಅವರ ಪತ್ರವು ಚರ್ಚೆಗೆ ಹೊಸ ಆಯಾಮ ನೀಡಿದೆ. ಸರ್ಕಾರ ಈ ಮನವಿಗೆ ಹೇಗೆ ಸ್ಪಂದಿಸಲಿದೆ ಎಂಬುದು ಕಾದುನೋಡಬೇಕು.