RCB IPL ಕಪ್ ಗೆದ್ದರೆ, ರಾಜ್ಯವ್ಯಾಪಿ “RCB Fans” ಹಬ್ಬ ಆಚರಿಸುವಂತೆ ಸಿಎಂಗೆ ಅಭಿಮಾನಿ ಪತ್ರ!

IPL 2025 RCB: ಆರ್‌ಸಿಬಿ ಗೆದ್ರೆ ಒಂದು ದಿನ ರಜೆ ಘೋಷಿಸಿ..!

Befunky collage 2025 05 30t103305.291

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2025ರ ಪ್ಲೇಆಫ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೋಲುಣಿಸಿ ಫೈನಲ್‌ಗೆ ಪ್ರವೇಶಿಸಿದೆ. 18 ವರ್ಷಗಳಿಂದ ಟ್ರೋಫಿಗಾಗಿ ಕಾಯುತ್ತಿರುವ ಆರ್‌ಸಿಬಿ ಅಭಿಮಾನಿಗಳ ಕನಸು ಈಗ ಒಂದು ಹೆಜ್ಜೆ ದೂರದಲ್ಲಿದೆ. ಈ ಸಂತಸದ ಸಂದರ್ಭದಲ್ಲಿ, ಬೆಳಗಾವಿಯ ಗೋಕಾಕ್‌ನ ಯುವಕನೊಬ್ಬ ಆರ್‌ಸಿಬಿ ಐಪಿಎಲ್ ಕಪ್ ಗೆದ್ದರೆ ಆ ದಿನವನ್ನು ‘ಆರ್‌ಸಿಬಿ ಫ್ಯಾನ್ಸ್ ಹಬ್ಬ’ವೆಂದು ಘೋಷಿಸಿ ರಾಜ್ಯಾದ್ಯಂತ ರಜೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾನೆ.

ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಶಿವಾನಂದ ಮಲ್ಲಣ್ಣವರ್ ಎಂಬ ಯುವಕ ಈ ವಿಶೇಷ ಮನವಿಯನ್ನು ಸಿಎಂಗೆ ಸಲ್ಲಿಸಿದ್ದಾನೆ. ಆರ್‌ಸಿಬಿ ಕಪ್ ಗೆದ್ದ ದಿನವನ್ನು ಪ್ರತಿ ವರ್ಷ ‘ಕರ್ನಾಟಕ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ’ವಾಗಿ ಆಚರಿಸಲು ಮತ್ತು ರಾಜ್ಯವ್ಯಾಪಿ ರಜೆ ಘೋಷಿಸಲು ಅವರು ಒತ್ತಾಯಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್‌ಸಿಬಿ ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಶಿವಾನಂದ ಅವರ ಪತ್ರದಲ್ಲಿ, “ಆರ್‌ಸಿಬಿ ಐಪಿಎಲ್ ಫೈನಲ್‌ನಲ್ಲಿ ಕಪ್ ಗೆದ್ದರೆ, ಆ ದಿನವನ್ನು ಕರ್ನಾಟಕ ರಾಜ್ಯದಲ್ಲಿ ‘ಆರ್‌ಸಿಬಿ ಫ್ಯಾನ್ಸ್ ಹಬ್ಬ’ವಾಗಿ ಘೋಷಿಸಬೇಕು. ಕರ್ನಾಟಕ ರಾಜ್ಯೋತ್ಸವದಂತೆ ಎಲ್ಲ ಜಿಲ್ಲೆಗಳಲ್ಲಿ ಈ ದಿನವನ್ನು ಆಚರಿಸಲು ಸರ್ಕಾರ ಅನುವು ಮಾಡಿಕೊಡಬೇಕು. ಇದು ಲಕ್ಷಾಂತರ ಆರ್‌ಸಿಬಿ ಅಭಿಮಾನಿಗಳ ಬಹುಕಾಲದ ಕನಸಿನ ಗೆಲುವಿನ ಆಚರಣೆಯಾಗಲಿದೆ,” ಎಂದು ತಿಳಿಸಿದ್ದಾರೆ. ಈ ಘೋಷಣೆಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ, ರಜೆ ಮತ್ತು ಹಬ್ಬದ ಆಚರಣೆಗೆ ಅನುಮತಿ ನೀಡಬೇಕೆಂದು ಎಲ್ಲ ಆರ್‌ಸಿಬಿ ಅಭಿಮಾನಿಗಳ ಪರವಾಗಿ ಕಳಕಳಿಯ ಮನವಿ ಮಾಡಿದ್ದಾರೆ.

ಈ ಮನವಿಯು ಕರ್ನಾಟಕದ ಆರ್‌ಸಿಬಿ ಅಭಿಮಾನಿಗಳ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಆರ್‌ಸಿಬಿ ತಂಡದ ಈ ಐತಿಹಾಸಿಕ ಫೈನಲ್ ಪ್ರವೇಶವು ರಾಜ್ಯದಾದ್ಯಂತ ಸಂತಸದ ವಾತಾವರಣ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ #RCBFansDay ಎಂಬ ಚರ್ಚೆ ಜೋರಾಗಿದ್ದು, ಶಿವಾನಂದ ಅವರ ಪತ್ರವು ಚರ್ಚೆಗೆ ಹೊಸ ಆಯಾಮ ನೀಡಿದೆ. ಸರ್ಕಾರ ಈ ಮನವಿಗೆ ಹೇಗೆ ಸ್ಪಂದಿಸಲಿದೆ ಎಂಬುದು ಕಾದುನೋಡಬೇಕು.

Exit mobile version