ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌

114 (12)

ದುಬೈ: ಏಷ್ಯಾಕಪ್‌ ಟೂರ್ನಿಯಲ್ಲಿ ಹೊಸ ವಿವಾದವೊಂದು ತಾರಕಕ್ಕೇರಿದೆ. ಹ್ಯಾಂಡ್‌ಶೇಕ್‌ ವಿಷಯವು ಈಗ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಯುಎಇ ವಿರುದ್ಧದ ಗುಂಪು ಹಂತದ ಪಂದ್ಯವನ್ನು ಪಾಕಿಸ್ತಾನ ಕ್ರಿಕೆಟ್ ತಂಡ ಬಹಿಷ್ಕರಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನ ಮತ್ತು ಯುಎಇ ನಡುವಿನ ಗುಂಪು ಹಂತದ ಪಂದ್ಯವು ಇಂದು ರಾತ್ರಿ ಭಾರತೀಯ ಕಾಲಮಾನಕ್ಕೆ 8 ಗಂಟೆಗೆ ಆರಂಭವಾಗಬೇಕಿತ್ತು. ಯುಎಇ ತಂಡವು ಈಗಾಗಲೇ ಮೈದಾನದಲ್ಲಿ ತಯಾರಿ ನಡೆಸಿದ್ದು, ಪಂದ್ಯಕ್ಕೆ ಸಂಪೂರ್ಣ ಸಿದ್ಧವಾಗಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತನ್ನ ಆಟಗಾರರನ್ನು ಇನ್ನೂ ಹೋಟೆಲ್‌ನಲ್ಲಿಯೇ ಇರಿಸಿದ್ದು, ಮೈದಾನಕ್ಕೆ ತೆರಳದಂತೆ ಸೂಚಿಸಿದೆ. ಆಟಗಾರರಿಗೆ ಮುಂದಿನ ನಿರ್ದೇಶನ ಬರುವವರೆಗೆ ತಮ್ಮ ಕೊಠಡಿಗಳಲ್ಲಿಯೇ ಉಳಿಯಲು ತಿಳಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಶೀಘ್ರದಲ್ಲೇ ಸುದ್ದಿಗೋಷ್ಠಿಯನ್ನು ನಡೆಸಿ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಪಾಕಿಸ್ತಾನ ಈ ಪಂದ್ಯವನ್ನು ಬಹಿಷ್ಕರಿಸಿದರೆ, ಯುಎಇ ತಂಡವು ಸೂಪರ್‌ ಫೋರ್‌ ಹಂತಕ್ಕೆ ಸ್ವಯಂಚಾಲಿತವಾಗಿ ಪ್ರವೇಶ ಪಡೆಯಲಿದೆ.

ವಿವಾದಕ್ಕೆ ಕಾರಣವೇನು?

ಈ ವಿವಾದಕ್ಕೆ ಕಾರಣ ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಕಂಡುಬಂದ ಘಟನೆಯೊಂದಕ್ಕೆ ಸಂಬಂಧಿಸಿದೆ. ಆ ಪಂದ್ಯದ ಟಾಸ್‌ ಸಂದರ್ಭದಲ್ಲಿ ಟೀಂ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್‌ ಅವರು ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಕೈಕುಲುಕಲಿಲ್ಲ. ಅಷ್ಟೇ ಅಲ್ಲ, ಪಂದ್ಯದ ಕೊನೆಯಲ್ಲಿ ಭಾರತದ ಆಟಗಾರರು ಪಾಕಿಸ್ತಾನ ತಂಡದ ಆಟಗಾರರೊಂದಿಗೆ ಕೈಕುಲುಕುವ ಸೌಜನ್ಯವನ್ನೂ ತೋರಿರಲಿಲ್ಲ.

ಟಾಸ್‌ ಸಂದರ್ಭದಲ್ಲಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್, ಸಲ್ಮಾನ್ ಅಲಿ ಅಘಾ ಅವರಿಗೆ ಭಾರತದ ನಾಯಕನ ಜೊತೆ ಕೈಕುಲುಕದಂತೆ ಸೂಚಿಸಿದ್ದರು ಎಂದು ವರದಿಯಾಗಿದೆ. ಈ ಘಟನೆಯನ್ನು ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ನಡವಳಿಕೆ ಎಂದು ಭಾವಿಸಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಮುಖ್ಯಸ್ಥ ಮೊಹ್ಸಿನ್ ನಖ್ವಿ ಕೂಡ ಈ ವಿಷಯವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕೆಂದು ಐಸಿಸಿಗೆ ಮನವಿ ಸಲ್ಲಿಸಿತ್ತು. ಆದರೆ, ಐಸಿಸಿಯು ಈ ಮನವಿಯನ್ನು ತಿರಸ್ಕರಿಸಿ, ಯುಎಇ ವಿರುದ್ಧದ ಇಂದಿನ ಪಂದ್ಯಕ್ಕೆ ಆಂಡಿ ಪೈಕ್ರಾಫ್ಟ್ ಅವರನ್ನೇ ಮ್ಯಾಚ್ ರೆಫರಿಯಾಗಿ ನಿಯೋಜಿಸಿತ್ತು. ಈ ನಿರ್ಧಾರವು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಆಕ್ರೋಶಕ್ಕೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಅವರು ಇಂದಿನ ಪಂದ್ಯವನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Exit mobile version