ಚೆನ್ನೈ: ನಟಿ ತ್ರಿಷಾ ಕೃಷ್ಣನ್ (Trisha Krishnan) ಅವರ ಅಭಿಮಾನಿಗಳು ಸರ್ಪ್ರೈಸ್ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಿರುದಿನಿಂದ ಸ್ಫೂರ್ತಿ ಪಡೆದು ಅಭಿಮಾನಿಗಳು ಹೊಸ ಸಂಘಟನೆಯೊಂದನ್ನು ಆರಂಭಿಸಿದ್ದು, ತ್ರಿಷಾ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಎಂಬ ಚರ್ಚೆ ಮತ್ತೆ ಜೋರಾಗಿದೆ.
ಸಂಘಟನೆಯ ಹೆಸರು ಮತ್ತು ಜಯಲಲಿತಾ ಹೋಲಿಕೆ
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ತ್ರಿಷಾ ಅಭಿಮಾನಿಗಳು ‘ಇಳಯ ಪುರಚ್ಚಿ ತಲೈವಿ ತ್ರಿಷಾ ಪೇರವೈ’ (ಯುವ ಕ್ರಾಂತಿಕಾರಿ ನಾಯಕಿ ತ್ರಿಷಾ ವೇದಿಕೆ) ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. ಹಿಂದೆ ಜಯಲಲಿತಾ ಅವರನ್ನು ಅಭಿಮಾನಿಗಳು ‘ಪುರಚ್ಚಿ ತಲೈವಿ’ ಎಂದು ಕರೆಯುತ್ತಿದ್ದರು. ಈಗ ಅದೇ ಹೆಸರಿಗೆ ‘ಇಳಯ’ (ಯುವ) ಎಂಬ ಪದ ಸೇರಿಸಿ ತ್ರಿಷಾ ಅವರಿಗೆ ಈ ಬಿರುದು ನೀಡಿರುವುದು ಎಲ್ಲರ ಹುಬ್ಬೇರಿಸಿದೆ.
ಸಂಘಟನೆಯ ಉದ್ದೇಶ
ಈ ಸಂಘಟನೆಯ ಸಂಯೋಜಕ ರಾಜಗೋಪಾಲ್ ಮಾತನಾಡಿ, ತ್ರಿಷಾ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಸೇರಿ ರಾಜಕೀಯಕ್ಕೆ ಬಂದರೆ ಜನರಿಗೆ ಒಳ್ಳೆಯದಾಗುತ್ತದೆ ಎಂಬ ಆಸೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂಘಟನೆಗೆ ತ್ರಿಷಾ ಅವರ ಒಪ್ಪಿಗೆ ಇದೆಯಾ ಅಥವಾ ಇಲ್ಲವಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನವೆಂಬರ್ 24ರಂದು ತಿರುನೆಲ್ವೇಲಿಯಲ್ಲಿ ಸಂಘಟನೆಗೆ ಅಧಿಕೃತ ಚಾಲನೆ ನೀಡಲು ಸಜ್ಜಾಗಿದ್ದಾರೆ.
ತ್ರಿಷಾ ವೃತ್ತಿಜೀವನ
ಕಳೆದ 27 ವರ್ಷಗಳಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ತ್ರಿಷಾ, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಗಿಲ್ಲಿ, ವಿನ್ನೈತಾಂಡಿ ವರುವಾಯಾ, 96, ಪೊನ್ನಿಯಿನ್ ಸೆಲ್ವನ್, ಲಿಯೋ, ಥಗ್ ಲೈಫ್ ಹಾಗೂ ಇತ್ತೀಚೆಗೆ ಸೂರ್ಯ ಜೊತೆ ‘ಕರುಪ್ಪು’ ಸಿನಿಮಾದಲ್ಲಿ ಕಾಣಿಸಿಕೊಂಡು ಈಗಲೂ ಟಾಪ್ ನಟಿಯಾಗಿ ಮೆರೆಯುತ್ತಿದ್ದಾರೆ.
ವಿಜಯ್ ಜೊತೆ ಸ್ನೇಹದ ಚರ್ಚೆ
ಸಿಎಂ ವಿಜಯ್ ಮತ್ತು ತ್ರಿಷಾ ನಡುವಿನ ಸ್ನೇಹದ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಗಾಸಿಪ್ ಹರಿದಾಡುತ್ತಿದೆ. ಮೇ 2026ರಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲೂ ತ್ರಿಷಾ ಭಾಗವಹಿಸಿ, ವಿಜಯ್ ಅವರ ಪೋಷಕರನ್ನು ಸ್ವಾಗತಿಸಿದ್ದು ದೊಡ್ಡ ಸುದ್ದಿಯಾಗಿತ್ತು.
ರಾಜಕೀಯ ಪ್ರವೇಶದ ಚರ್ಚೆ
ತ್ರಿಷಾ ಅವರ ರಾಜಕೀಯ ಪ್ರವೇಶಕ್ಕೆ ಕೊಳತ್ತೂರು ಕ್ಷೇತ್ರದ ಉಪಚುನಾವಣೆ ಚರ್ಚೆಗೆ ಬಂದಿದೆ. ಟಿವಿಕೆ ಶಾಸಕ ವಿ.ಎಸ್. ಬಾಬು ಅವರು ಅನಾರೋಗ್ಯದ ಕಾರಣ ಮೂರು ದಿನಗಳ ಹಿಂದೆ ನಿಧನರಾದ ಹಿನ್ನೆಲೆ ಈ ಕ್ಷೇತ್ರ ತೆರವಾಗಿದೆ. ಬಾಬು ಅವರು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸಿ ಗೆದ್ದು ಬೀಗಿದ್ದರು. ಈ ಸ್ಥಾನಕ್ಕೆ ಟಿವಿಕೆ ಪಕ್ಷದಿಂದಲೇ ತ್ರಿಷಾ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಚರ್ಚೆ ನಡೆಯುತ್ತಿದೆ.
ಈ ಹಿಂದೆ, ಮುಖ್ಯಮಂತ್ರಿ ವಿಜಯ್ ಅವರು ತಿರುಚಿರಾಪಳ್ಳಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳನ್ನು ಹೊಂದಲು ಸಾಧ್ಯವಿಲ್ಲದ ಕಾರಣ ಅವರು ಆ ಸ್ಥಾನವನ್ನು ತ್ಯಜಿಸಬೇಕಾಗಿತ್ತು. ಆ ಸ್ಥಾನದಿಂದ ತ್ರಿಷಾ ಅವರನ್ನು ಕಣಕ್ಕಿಳಿಸುವ ಯೋಜನೆ ಕೂಡ ಚರ್ಚೆಯಾಗಿತ್ತು. ಆದರೆ ತ್ರಿಷಾ ಅಥವಾ ಟಿವಿಕೆ ಪಕ್ಷದಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.
ಅಧಿಕೃತ ಹೇಳಿಕೆ ಬಾಕಿ
ಎಲ್ಲಾ ಚರ್ಚೆಗಳ ನಡುವೆಯೂ, ತ್ರಿಷಾ ಅವರು ಇಲ್ಲಿಯವರೆಗೆ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.





