ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸರ್ಕಾರದ ಭರವಸೆ ನೀಡಿದ ಬಳಿಕವೂ ಬೇಡಿಕೆಗಳು ಈಡೇರದ ಹಿನ್ನೆಲೆ ಕಾರ್ಯಕರ್ತೆಯರ ಆಕ್ರೋಶ ಹೆಚ್ಚಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆರಂಭವಾಗಿರುವ ಅಹೋರಾತ್ರಿ ಪ್ರತಿಭಟನೆ ಏಳನೇ ದಿನಕ್ಕೂ ಮುಂದುವರಿದಿದ್ದು, ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ದಿನಗಳಿಂದ ಹಗಲು-ರಾತ್ರಿ ಎನ್ನದೆ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ತಮ್ಮ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬುದು ಕಾರ್ಯಕರ್ತೆಯರ ಆರೋಪವಾಗಿದೆ. ಕೇವಲ ಭರವಸೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
7ನೇ ದಿನವೂ ಮುಂದುವರಿದ ಹೋರಾಟ
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದ್ದರೂ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ. ಬದಲಿಗೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ನಲ್ಲಿ ಜಮಾಯಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತಿದ್ದಾರೆ.
ಇಂದು ಪ್ರತಿಭಟನೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಕಾರ್ಯಕರ್ತೆಯರು ಸಿದ್ಧತೆ ನಡೆಸಿದ್ದಾರೆ. ಫ್ರೀಡಂ ಪಾರ್ಕ್ ಸುತ್ತಲೂ ಮಾನವ ಸರಪಳಿ ನಿರ್ಮಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಯೋಜಿಸಿದ್ದಾರೆ. ತಮ್ಮ ಹೋರಾಟಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಜೆನ್ ಝೀ ಬೆಂಬಲ ಕೋರಿದ ಆಶಾ ಕಾರ್ಯಕರ್ತೆಯರು
ಈ ಬಾರಿ ಆಶಾ ಕಾರ್ಯಕರ್ತೆಯರು ತಮ್ಮ ಹೋರಾಟಕ್ಕೆ ಯುವ ಸಮುದಾಯದ ಬೆಂಬಲವನ್ನೂ ಕೋರಿದ್ದಾರೆ. ವಿಶೇಷವಾಗಿ ಜೆನ್ ಝೀ ಯುವಜನತೆ ತಮ್ಮ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ತಳಮಟ್ಟದಿಂದ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಯುವಜನತೆ ಅರ್ಥಮಾಡಿಕೊಳ್ಳಬೇಕು. ಅವರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಧ್ವನಿಯಾಗಬೇಕು ಎಂಬುದು ಕಾರ್ಯಕರ್ತೆಯರ ಆಶಯವಾಗಿದೆ.
ಇನ್ನೊಂದೆಡೆ, ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಈಗಾಗಲೇ ಸ್ಯಾಂಡಲ್ವುಡ್ನ ಹಲವು ನಟಿಯರು ಬೆಂಬಲ ಸೂಚಿಸಿದ್ದಾರೆ. ನಟಿ ರಮ್ಯಾ ಪ್ರತಿಭಟನಾಕಾರರ ಪರವಾಗಿ ಧ್ವನಿ ಎತ್ತಿದ ಬೆನ್ನಲ್ಲೇ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಮತ್ತು ನಟಿ ಕಾರುಣ್ಯ ರಾಮ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳೇನು?
ಆಶಾ ಕಾರ್ಯಕರ್ತೆಯರು ಸರ್ಕಾರದ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಅದರಲ್ಲೂ ಮಾಸಿಕ ಗೌರವಧನ ಹೆಚ್ಚಳ, ಬಾಕಿ ಹಣ ಬಿಡುಗಡೆ, ನಿವೃತ್ತಿ ಸೌಲಭ್ಯ ಮತ್ತು ಹೆಚ್ಚುವರಿ ಕೆಲಸದ ಹೊರೆ ಕಡಿತಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು ಹೀಗಿವೆ
-
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನವನ್ನು 15,000 ರೂಪಾಯಿಗೆ ನಿಗದಿಪಡಿಸಬೇಕು.
-
ಬಾಕಿ ಉಳಿದಿರುವ ಗೌರವಧನ ಹಾಗೂ ಇತರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು.
-
ನಿವೃತ್ತಿ ಸೌಲಭ್ಯ ಮತ್ತು ಆಶಾ ನಿಧಿ ಯೋಜನೆಯಡಿ ಆರ್ಥಿಕ ನೆರವು ಒದಗಿಸಬೇಕು.
-
ಗಂಭೀರ ಅನಾರೋಗ್ಯಕ್ಕೆ ತುತ್ತಾದ ಕಾರ್ಯಕರ್ತೆಯರಿಗೆ ಮೂರು ತಿಂಗಳ ಗೌರವಧನದಷ್ಟು ಆರ್ಥಿಕ ನೆರವು ನೀಡಬೇಕು.
-
ಸಮಸ್ತ ಆ್ಯಪ್ ಮೂಲಕ ನೀಡಲಾಗುತ್ತಿರುವ ಹೆಚ್ಚುವರಿ ಕೆಲಸಗಳನ್ನು ಹಿಂಪಡೆಯಬೇಕು.
-
2024-25ನೇ ಸಾಲಿನ 1,500 ರೂಪಾಯಿ ಮಾಸಿಕ ಹಿಂಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು.
-
ನಿವೃತ್ತಿ ಹೊಂದುವ ಆಶಾ ಕಾರ್ಯಕರ್ತೆಯರಿಗೆ 5 ಲಕ್ಷ ರೂಪಾಯಿ ಗ್ರಾಚ್ಯುಟಿ ನೀಡಬೇಕು.
-
ಈಗಾಗಲೇ ನಿವೃತ್ತರಾದವರಿಗೆ ಬಾಕಿ ಇರುವ ನಿವೃತ್ತಿ ಸೌಲಭ್ಯಗಳನ್ನು ತಕ್ಷಣ ವಿತರಿಸಬೇಕು.
-
ಆಶಾ ಕಾರ್ಯಕರ್ತೆಯರಿಗೆ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು.
-
ಆರೋಗ್ಯ ಇಲಾಖೆಗೆ ಸಂಬಂಧಿಸದ ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ವಹಿಸಬಾರದು.
-
NIOS ತರಬೇತಿ ಪೂರ್ಣಗೊಳಿಸಿದ ಕಾರ್ಯಕರ್ತೆಯರಿಗೆ 5,000 ರೂಪಾಯಿ ವಿಶೇಷ ಪ್ರೋತ್ಸಾಹಧನ ನೀಡಬೇಕು.
ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಆಕ್ರೋಶ
ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಆರೋಗ್ಯ ಜಾಗೃತಿ, ತಾಯಿ ಮತ್ತು ಮಕ್ಕಳ ಆರೋಗ್ಯ, ಲಸಿಕೆ ಅಭಿಯಾನ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.





