ಚೆನ್ನೈ: ಕಾಲಿವುಡ್ನ ಅತ್ಯಂತ ಬೇಡಿಕೆಯ ನಟ ಧನುಷ್ ಅವರು, ದಳಪತಿ ವಿಜಯ್ ಅವರ ಹಾದಿಯಲ್ಲೇ ತಮಿಳುನಾಡು ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಮತ್ತೆ ಶುರುವಾಗುತ್ತಾ ‘ಫ್ಯಾನ್ಸ್ ವಾರ್’?
ಕಾಲಿವುಡ್ನಲ್ಲಿ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರಿಗೆ ಇರುವಷ್ಟೇ ದೊಡ್ಡ ಅಭಿಮಾನಿ ಬಳಗ ಧನುಷ್ ಅವರಿಗೂ ಇದೆ. ಈ ಹಿಂದೆಯೂ ಹಲವು ಬಾರಿ ಧನುಷ್ ಮತ್ತು ವಿಜಯ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ‘ಫ್ಯಾನ್ಸ್ ವಾರ್’ ನಡೆದಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ತಿರುವಳ್ಳೂರಿನಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ಧನುಷ್ ಮಾಡಿದ ಭಾಷಣದ ಕೆಲವು ಸಾಲುಗಳು ಹಾಗೂ ಅಭಿಮಾನಿ ಸಂಘದ ಮರುಸಂಘಟನೆಯು, ಅವರು ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ಚರ್ಚೆಗೆ ಪುಷ್ಟಿ ನೀಡಿವೆ. ಒಂದು ವೇಳೆ ಧನುಷ್ ಸಕ್ರಿಯ ರಾಜಕೀಯ ಪ್ರವೇಶಿಸಿದರೆ, ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವಿನ ಪೈಪೋಟಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ವೈರಲ್ ಆಯ್ತು ಸಂಸದೆ ಕನ್ನಿಮೊಳಿ ಹೇಳಿಕೆ
ಇತ್ತೀಚೆಗೆ ಉಪಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಡಿಎಂಕೆ ಸಂಸದೆ ಕನ್ನಿಮೊಳಿ ಅವರು ಮುಖ್ಯಮಂತ್ರಿ ವಿಜಯ್ ಸರ್ಕಾರವನ್ನು ಟೀಕಿಸುವ ಭರದಲ್ಲಿ ಧನುಷ್ ಹೆಸರನ್ನು ಪ್ರಸ್ತಾಪಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಗೂ ಮುನ್ನ ವಿಜಯ್ ಅವರು ನಿರುದ್ಯೋಗಿ ಪದವೀಧರರಿಗೆ (ತಮಿಳಿನಲ್ಲಿ ‘ವೇಲೈಯಿಲ್ಲಾ ಪಟ್ಟದಾರಿ’) ತಿಂಗಳಿಗೆ ₹4,000 ಭತ್ಯೆ ನೀಡುವುದಾಗಿ ಭರವಸೆ ನೀಡಿದ್ದರು. ಇದನ್ನು ವ್ಯಂಗ್ಯವಾಡಿದ ಕನ್ನಿಮೊಳಿ, “ನಿರುದ್ಯೋಗಿ ಪದವೀಧರರಿಗೆ 4,000 ರೂಪಾಯಿ ಇನ್ನೂ ಬಂದಿಲ್ಲ. ಆದರೆ ‘ವೇಲೈಯಿಲ್ಲಾ ಪಟ್ಟದಾರಿ’ (VIP) ಸಿನಿಮಾದ ನಟ ಧನುಷ್ ಮಾತ್ರ ರಾಜಕೀಯಕ್ಕೆ ಬಂದಿದ್ದಾರೆ” ಎಂದು ಕಾಲೆಳೆದಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜಯ್ ಹಾಗೂ ಧನುಷ್ ಅಭಿಮಾನಿಗಳ ನಡುವೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಕಾಲಿವುಡ್ ನಾಯಕರಿಗೆ ರಾಜಕೀಯ ಹೊಸದಲ್ಲ
ತಮಿಳುನಾಡಿನಲ್ಲಿ ಚಿತ್ರರಂಗದ ಗಣ್ಯರು ರಾಜಕೀಯಕ್ಕೆ ಬರುವುದು ಹೊಸ ವಿಷಯವೇನಲ್ಲ. ಎಂಜಿಆರ್, ಜಯಲಲಿತಾ ಕಾಲದಿಂದಲೂ ತಮಿಳು ಸಿನಿಮಾ ಮತ್ತು ರಾಜಕೀಯದ ನಡುವೆ ಅವಿನಾಭಾವ ನಂಟಿದೆ. ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿ, ನಂತರ ಅನಾರೋಗ್ಯದ ಕಾರಣದಿಂದ ಹಿಂದೆ ಸರಿದಿದ್ದರು. ಅಲ್ಲದೆ, ವಿಜಯ್ ಅವರು ರಾಜಕೀಯ ಪಕ್ಷ ಘೋಷಿಸಿದ ಸಂದರ್ಭದಲ್ಲಿ ನಟ ಅಜಿತ್ ಕುಮಾರ್ ಅವರ ಹೆಸರೂ ಕೇಳಿಬಂದಿತ್ತಾದರೂ, ಅಜಿತ್ ತಮಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಒಟ್ಟಾರೆಯಾಗಿ, ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಕಾಲಿವುಡ್ನಿಂದ ವಿಜಯ್ ಬೆನ್ನಲ್ಲೇ ಧನುಷ್ ಕೂಡ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ





