ಬೆಂಗಳೂರು: ಆಟವಾಡುತ್ತಿದ್ದ ಪುಟ್ಟ ಮಗು ಬಿಸಿ ಕೆಮಿಕಲ್ ತುಂಬಿದ್ದ ಬಕೆಟ್ಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಶ್ರೀರಾಮಪುರದ ಎಲ್ಎನ್ ಪುರದಲ್ಲಿ ನಡೆದಿದೆ. ನವೆಂಬರ್ 2ರಂದು ಈ ದುರಂತ ಸಂಭವಿಸಿದ್ದು, ಗಾಯಗೊಂಡಿದ್ದ ಒಂದು ವರ್ಷ 9 ತಿಂಗಳ ಮಗು ಸುಬ್ರಮಣಿ, ಸತತ 10 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ಕೊನೆಯುಸಿರೆಳೆದಿದೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆಟವಾಡುತ್ತಿದ್ದಾಗ ಸಂಭವಿಸಿದ ದುರಂತ!
ಬೆಂಗಳೂರಿನ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಎನ್ ಪುರದಲ್ಲಿ ಈ ಘಟನೆ ನಡೆದಿದೆ. ಸುಬ್ರಮಣಿ ತನ್ನ ಕುಟುಂಬದೊಂದಿಗೆ ವಾಸವಿದ್ದ ಮನೆಯ ಪಕ್ಕದಲ್ಲೇ ಶಿವಂ ಕಾಪರ್ ಮೇಕರ್ ಎಂಬ ಕೆಮಿಕಲ್ ಫ್ಯಾಕ್ಟರಿ ಇದೆ. ನವೆಂಬರ್ 2ರಂದು ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಮಗು ತನ್ನ 8 ವರ್ಷದ ಅಕ್ಕನೊಂದಿಗೆ ಆಟವಾಡುತ್ತಿತ್ತು.
ಈ ವೇಳೆ ಆಟವಾಡುತ್ತಾ ಮನೆಯ ಪಕ್ಕದಲ್ಲಿದ್ದ ಕಾರ್ಖಾನೆಯ ಆವರಣಕ್ಕೆ ಮಗು ತೆರಳಿದೆ. ಅಲ್ಲಿ ಬಿಸಿ ಕೆಮಿಕಲ್ ತುಂಬಿದ್ದ ಬಕೆಟ್ ಇತ್ತು. ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬಕೆಟ್ಗೆ ಬಿದ್ದಿದೆ. ಬಕೆಟ್ನಲ್ಲಿದ್ದ ಬಿಸಿ ರಾಸಾಯನಿಕದಿಂದಾಗಿ ಮಗುವಿಗೆ ಗಂಭೀರ ಗಾಯಗಳಾಗಿವೆ.
ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು
ಮಗು ಕೆಮಿಕಲ್ ತುಂಬಿದ್ದ ಬಕೆಟ್ಗೆ ಬಿದ್ದಿರುವುದನ್ನು ಗಮನಿಸಿದ ಮಗುವಿನ ಅಕ್ಕ ಕಾರ್ಖಾನೆಯಲ್ಲಿದ್ದವರು ತಕ್ಷಣ ಮಗುವನ್ನು ಹೊರತೆಗೆದಿದ್ದಾರೆ. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಬಿಸಿ ಕೆಮಿಕಲ್ನಿಂದ ಉಂಟಾದ ಗಾಯಗಳ ತೀವ್ರತೆಯಿಂದಾಗಿ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡಿದರೂ ಮಗುವಿನ ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಂಡುಬರಲಿಲ್ಲ.
10 ದಿನಗಳ ಕಾಲ ಸಾವು-ಬದುಕಿನ ಹೋರಾಟ
ನವೆಂಬರ್ 2ರಂದು ಸಂಭವಿಸಿದ ಈ ದುರಂತದ ಬಳಿಕ ಸುಬ್ರಮಣಿ ಸುಮಾರು 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ವೈದ್ಯರೂ ಮಗುವನ್ನು ಉಳಿಸಲು ಪ್ರಯತ್ನ ಮುಂದುವರಿಸಿದ್ದರು.
ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸತತ ಹತ್ತು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಮಗು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
ಮಗು ಕೆಮಿಕಲ್ ತುಂಬಿದ್ದ ಬಕೆಟ್ಗೆ ಬೀಳುವ ದೃಶ್ಯ ಕಾರ್ಖಾನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಈ ದೃಶ್ಯಾವಳಿ ಲಭ್ಯವಾಗಿದ್ದು, ಘಟನೆ ನಡೆದ ಸಂದರ್ಭದ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ.
ಮಗು ತನ್ನ ಅಕ್ಕನೊಂದಿಗೆ ಆಟವಾಡುತ್ತಾ ಕಾರ್ಖಾನೆಯ ಕಡೆಗೆ ಹೋಗಿರುವುದು ಹಾಗೂ ಬಳಿಕ ಬಕೆಟ್ಗೆ ಬಿದ್ದಿರುವ ಘಟನೆ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ.
ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲು
ಮಗುವಿನ ಸಾವಿನ ಹಿನ್ನೆಲೆಯಲ್ಲಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಪ್ರಕರಣ ದಾಖಲಾಗಿದೆ.





