ಮಂಡ್ಯ: ನಂದಿನಿ ಮೊಸರು ಪ್ಯಾಕೆಟ್ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂಬ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ನಂದಿನಿ ಮೊಸರಿನ ಪ್ಯಾಕೆಟ್ನೊಳಗೆ ಸಿಮ್ ಕಾರ್ಡ್ ಸಿಕ್ಕಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ವ್ಯಕ್ತಿಯ ಆರೋಪ ಸುಳ್ಳು ಎಂಬುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಮೊಸರು ಪ್ಯಾಕೆಟ್ ಒಳಗಿನಿಂದ ಸಿಮ್ ಕಾರ್ಡ್ ಬಂದಿರಲಿಲ್ಲ. ಬದಲಾಗಿ, ದ್ವಿಚಕ್ರ ವಾಹನದ ಪೌಚ್ನಲ್ಲಿದ್ದ ಸಿಮ್ ಕಾರ್ಡ್ ಆಕಸ್ಮಿಕವಾಗಿ ಮೊಸರಿನೊಂದಿಗೆ ಬಾಣಲೆಗೆ ಬಿದ್ದಿತ್ತು ಎಂಬ ವಿಚಾರ ಬಹಿರಂಗವಾಗಿದೆ.
ಮದ್ದೂರು ಮೂಲದ ಅರುಣ್ ಕುಮಾರ್ ಎಂಬುವವರು ನಂದಿನಿ ಮೊಸರು ಖರೀದಿಸಿದ ಬಳಿಕ ಅದರಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಗ್ರಾಹಕರಲ್ಲಿ ಆತಂಕ ಮೂಡಿತ್ತು. ಕರ್ನಾಟಕ ಹಾಲು ಮಹಾಮಂಡಳಿಯ (KMF) ನಂದಿನಿ ಬ್ರ್ಯಾಂಡ್ಗೂ ಇದರಿಂದ ಮುಜುಗರ ಉಂಟಾಗಿತ್ತು.
ವೈರಲ್ ವಿಡಿಯೋ ಬೆನ್ನಲ್ಲೇ ಪೊಲೀಸರ ಎಂಟ್ರಿ!
ನಂದಿನಿ ಮೊಸರು ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂಬ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಈ ನಡುವೆ ನಂದಿನಿ ಉತ್ಪನ್ನಗಳ ವಿರುದ್ಧ ಸುಳ್ಳು ಮಾಹಿತಿ ಹರಡಿ ಬ್ರ್ಯಾಂಡ್ನ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಹಾಲು ಒಕ್ಕೂಟದ (ಮನ್ಮುಲ್) ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಅಧಿಕಾರಿಯ ದೂರಿನ ಹಿನ್ನೆಲೆ ಮಂಡ್ಯ ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದರು. ವಿಡಿಯೋ ಮಾಡಿದ್ದ ಮದ್ದೂರಿನ ಅರುಣ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಮೊಸರು ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್ ಹೇಗೆ ಬಂತು? ಅದು ಯಾರಿಗೆ ಸೇರಿದ್ದು? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸರು ಮುಂದಾದರು.
ಸಿಮ್ ಕಾರ್ಡ್ ಯಾರ ಹೆಸರಿನಲ್ಲಿತ್ತು ಗೊತ್ತಾ?
ಪೊಲೀಸರು ವಿಡಿಯೋದಲ್ಲಿದ್ದ ಜಿಯೋ ಸಿಮ್ ಕಾರ್ಡ್ನ ವಿವರಗಳನ್ನು ಪರಿಶೀಲಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಮೊಸರಿನಲ್ಲಿ ಸಿಕ್ಕಿದೆ ಎನ್ನಲಾದ ಸಿಮ್ ಕಾರ್ಡ್ ಅರುಣ್ ಕುಮಾರ್ ಅವರ ಭಾವಮೈದನ ಹೆಸರಿನಲ್ಲಿ ನೋಂದಣಿಯಾಗಿತ್ತು. ಅಷ್ಟೇ ಅಲ್ಲದೆ, ಆ ಸಿಮ್ ಕಾರ್ಡ್ ಅನ್ನು ಅರುಣ್ ಕುಮಾರ್ ಅವರ ಪತ್ನಿಯೇ ಬಳಕೆ ಮಾಡುತ್ತಿದ್ದರು ಎಂಬುದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ.
ಈ ಮಾಹಿತಿ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ಮೊಸರು ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂಬ ಆರೋಪದ ಹಿಂದಿನ ಸತ್ಯವನ್ನು ತಿಳಿದುಕೊಳ್ಳಲು ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದರು. ಈ ವೇಳೆ ಅರುಣ್ ಕುಮಾರ್ ಅವರಿಂದ ಘಟನೆ ನಡೆದ ದಿನದ ಸಂಪೂರ್ಣ ವಿವರ ಹೊರಬಿದ್ದಿದೆ.
ಅಂದು ನಡೆದಿದ್ದೇನು? ಪೊಲೀಸರ ಮುಂದೆ ಅರುಣ್ ಹೇಳಿದ್ದೇನು?
ಪೊಲೀಸರ ವಿಚಾರಣೆ ವೇಳೆ ಅರುಣ್ ಕುಮಾರ್ ನೀಡಿರುವ ಹೇಳಿಕೆಯ ಪ್ರಕಾರ, ಅವರು ಅಂಗಡಿಯಿಂದ ನಂದಿನಿ ಮೊಸರು ಪ್ಯಾಕೆಟ್ ಖರೀದಿಸಿ ಮನೆಗೆ ತಂದಿದ್ದರು. ಈ ವೇಳೆ ಅವರ ದ್ವಿಚಕ್ರ ವಾಹನದ ಪೌಚ್ನಲ್ಲಿದ್ದ ಸಿಮ್ ಕಾರ್ಡ್ ಪ್ಯಾಕೆಟ್ನ ಹೊರಭಾಗಕ್ಕೆ ಅಂಟಿಕೊಂಡಿತ್ತು. ಆದರೆ, ಅದನ್ನು ಅವರು ಗಮನಿಸಿರಲಿಲ್ಲ.
ಮನೆಗೆ ಬಂದ ಬಳಿಕ ಮೊಸರನ್ನು ಬಾಣಲೆಗೆ ಸುರಿಯುವ ಸಂದರ್ಭದಲ್ಲಿ ಪ್ಯಾಕೆಟ್ಗೆ ಹೊರಗಿನಿಂದ ಅಂಟಿಕೊಂಡಿದ್ದ ಸಿಮ್ ಕಾರ್ಡ್ ಕೂಡ ಮೊಸರಿನೊಂದಿಗೆ ಬಾಣಲೆಗೆ ಬಿದ್ದಿದೆ. ಇದನ್ನು ಗಮನಿಸಿದ ಅರುಣ್, ಸಿಮ್ ಕಾರ್ಡ್ ಮೊಸರು ಪ್ಯಾಕೆಟ್ನ ಒಳಗಿನಿಂದಲೇ ಬಂದಿದೆ ಎಂದು ಭಾವಿಸಿದ್ದಾರೆ. ತಕ್ಷಣ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.
ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ಅರುಣ್ ಕುಮಾರ್!
ಪೊಲೀಸರ ವಿಚಾರಣೆಯಲ್ಲಿ ಘಟನೆಯ ಅಸಲಿ ಸಂಗತಿ ತಿಳಿದುಬಂದ ಬಳಿಕ ಅರುಣ್ ಕುಮಾರ್ ತಮ್ಮ ತಪ್ಪಿನ ಅರಿವಾಗಿದೆ ಎಂದು ಹೇಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಅವರು, ನಂದಿನಿ ಮೊಸರು ಪ್ಯಾಕೆಟ್ನಲ್ಲಿ ಯಾವುದೇ ಸಿಮ್ ಕಾರ್ಡ್ ಇರಲಿಲ್ಲ. ಕಣ್ತಪ್ಪಿನಿಂದ ನಡೆದ ಘಟನೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವಿಡಿಯೋ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ನಂದಿನಿ ಬ್ರ್ಯಾಂಡ್ನಿಂದ ಯಾವುದೇ ಲೋಪವಾಗಿಲ್ಲ. ತಾನು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ. ಗಾಬರಿ ಹಾಗೂ ಕಣ್ತಪ್ಪಿನಿಂದ ತಪ್ಪು ಮಾಹಿತಿ ಹರಡಿದೆ ಎಂದು ಹೇಳಿ ಕ್ಷಮೆ ಕೇಳಿದ್ದಾರೆ.





