ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯನ್ನು ಬಲಿ ಪಡೆದ ಬೆಂಗಳೂರಿನ ಭೀಕರ ಸರಣಿ ಕೊಲೆ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಿದೆ. ಹತ್ಯೆಗೀಡಾದವರ ಮೃತದೇಹಗಳಿಗಾಗಿ ಪೊಲೀಸರು ನಡೆಸುತ್ತಿದ್ದ ಹುಡುಕಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ನಾಪತ್ತೆಯಾಗಿದ್ದ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳು ಶಿರಾಡಿ ಘಾಟ್ನಲ್ಲಿ ಪತ್ತೆಯಾಗಿದ್ದು, ಇದರೊಂದಿಗೆ ಹತ್ಯೆಗೀಡಾದ ಏಳು ಮಂದಿಯ ಶವಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಪ್ರಕರಣದ ತನಿಖೆಯನ್ನು ವಿಶೇಷ ಪೊಲೀಸ್ ತಂಡಗಳು ಮತ್ತಷ್ಟು ಚುರುಕುಗೊಳಿಸಿದ್ದು, ಆರೋಪಿಯ ಹತ್ಯೆಯ ಸಂಚು ಹಾಗೂ ಶವ ವಿಲೇವಾರಿ ತಂತ್ರದ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.
ಒಂದೇ ಕುಟುಂಬದ ಏಳು ಮಂದಿಯನ್ನು ಹಂತ ಹಂತವಾಗಿ ಹತ್ಯೆ ಮಾಡಿದ್ದ ಆರೋಪಿ ಇಂದುಶೇಖರ್, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದಿದ್ದ ಎನ್ನಲಾಗಿದೆ. ಇದರಿಂದಾಗಿ ಪೊಲೀಸರು ಹಲವು ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಬೇಕಾಗಿತ್ತು. ಇದೀಗ ಶಿರಾಡಿ ಘಾಟ್ನಲ್ಲಿ ಉಳಿದ ಇಬ್ಬರ ಮೃತದೇಹಗಳು ಪತ್ತೆಯಾಗಿದೆ.
ಶಿರಾಡಿ ಘಾಟ್ನಲ್ಲಿ ಶಂಕರ್, ನಳಿನಿ ಶವ ಪತ್ತೆ
ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳನ್ನು ಸಕಲೇಶಪುರ ಪೊಲೀಸರು ಶಿರಾಡಿ ಘಾಟ್ನಲ್ಲಿ ಪತ್ತೆಹಚ್ಚಿದ್ದಾರೆ. ಆರೋಪಿಯ ವಿಚಾರಣೆ ವೇಳೆ ಲಭ್ಯವಾದ ಸುಳಿವುಗಳ ಆಧಾರದಲ್ಲಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದರು. ಅದರಂತೆ ಶಿರಾಡಿ ಘಾಟ್ನಲ್ಲಿ ಶೋಧ ನಡೆಸಿದಾಗ ಉಳಿದ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಇದುವರೆಗೆ ಏಳು ಮೃತದೇಹಗಳನ್ನು ನಾಲ್ಕು ವಿಭಿನ್ನ ಪ್ರದೇಶಗಳಲ್ಲಿ ಪತ್ತೆಹಚ್ಚಲಾಗಿದೆ. ಏಳು ವರ್ಷದ ಬಾಲಕ ಪುನೀತ್ನ ಮೃತದೇಹ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನಲ್ಲಿ ಸಿಕ್ಕಿತ್ತು. ಸುನೀತಾ ಮತ್ತು ರೂಪವತಿ ಅವರ ಮೃತದೇಹಗಳು ತಮಿಳುನಾಡಿನ ಸೇಲಂನಲ್ಲಿ ಪತ್ತೆಯಾಗಿದ್ದವು. ಶಿವಕುಮಾರ್ ಮತ್ತು ದಿವ್ಯಾ ಅವರ ಶವಗಳು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಿಕ್ಕಿದ್ದವು. ಇದೀಗ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳು ಶಿರಾಡಿ ಘಾಟ್ನಲ್ಲಿ ಪತ್ತೆಯಾಗಿವೆ.
ಶವಗಳನ್ನು ಪ್ಯಾಕ್ ಮಾಡಲು ವಸ್ತುಗಳ ಖರೀದಿ!
ಆರೋಪಿ ಇಂದುಶೇಖರ್ ಹತ್ಯೆ ನಡೆಸುವುದಕ್ಕೂ ಮುನ್ನ ಹಲವು ಸಿದ್ಧತೆಗಳನ್ನು ಮಾಡಿಕೊಂಡಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೃತದೇಹಗಳನ್ನು ಪ್ಯಾಕ್ ಮಾಡಲು ಬೇಕಾದ ಸಾಮಗ್ರಿಗಳು ಹಾಗೂ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಆತ ಖರೀದಿಸಿದ್ದ ಎನ್ನಲಾಗಿದೆ.
ಕೆಲವು ವಸ್ತುಗಳು ಸ್ಥಳೀಯ ಅಂಗಡಿಗಳಲ್ಲಿ ಲಭ್ಯವಾಗದ ಕಾರಣ ಯಶವಂತಪುರ ಮತ್ತು ಆರ್ಎಂಸಿ ಯಾರ್ಡ್ ಪ್ರದೇಶಗಳ ಅಂಗಡಿಗಳಿಗೂ ಆರೋಪಿ ಭೇಟಿ ನೀಡಿದ್ದ ಎನ್ನಲಾಗಿದೆ. ಇದೀಗ ಆತ ವಸ್ತುಗಳನ್ನು ಖರೀದಿಸಿದ್ದ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಅಂಗಡಿ ಮಾಲೀಕರು ಮತ್ತು ಕೆಲಸಗಾರರಿಂದಲೂ ಮಾಹಿತಿ ಪಡೆದು ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ.
ಇದಲ್ಲದೆ, ಕೊಲೆ ನಡೆದ ಪ್ರದೇಶಗಳ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಯ ಚಲನವಲನ, ವಾಹನ ಸಂಚಾರ ಮತ್ತು ವಸ್ತುಗಳ ಖರೀದಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ.
10 ಸುತ್ತು ಟೇಪ್ ಸುತ್ತಿ ಶವ ಸಾಗಿಸಲು ಸಂಚು?
ತನಿಖೆಯ ವೇಳೆ ಆರೋಪಿಯ ಶವ ವಿಲೇವಾರಿ ಯೋಜನೆ ಪೊಲೀಸರ ಗಮನ ಸೆಳೆದಿದೆ. ಮೃತದೇಹಗಳಿಗೆ ಸುಮಾರು 10 ಸುತ್ತು ಟೇಪ್ ಸುತ್ತಿ ಪ್ಯಾಕ್ ಮಾಡಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ. ಶವಗಳನ್ನು ಸಾಗಿಸುವುದು ಹಾಗೂ ವಿಲೇವಾರಿ ಮಾಡುವ ವಿಧಾನಗಳ ಕುರಿತು ಆರೋಪಿ ಇಂಟರ್ನೆಟ್ನಲ್ಲಿ ಹುಡುಕಾಟ ನಡೆಸಿದ್ದ ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಒಬ್ಬೊಬ್ಬರನ್ನಾಗಿ ಹಂತ ಹಂತವಾಗಿ ಏಳು ಮಂದಿಯನ್ನು ಹತ್ಯೆಗೈದು, ಮೃತದೇಹಗಳನ್ನು ಒಂದೊಂದು ಪ್ರದೇಶದಲ್ಲಿ ಎಸೆದು ಸಾಕ್ಷ್ಯಗಳನ್ನು ಮರೆಮಾಚಲು ಪ್ರಯತ್ನಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಈ ಎಲ್ಲ ಅಂಶಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಶಿವಕುಮಾರ್, ದಿವ್ಯಾ ಮೃತದೇಹಗಳ ಮರಣೋತ್ತರ ಪರೀಕ್ಷೆ
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದ ಶಿವಕುಮಾರ್ ಮತ್ತು ದಿವ್ಯಾ ಅವರ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಮೈಸೂರು ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಆರೋಪಿ ಮತ್ತು ಮೃತರ ಸಂಬಂಧಿಕರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗಿದೆ.
ವಾಹನವನ್ನು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ, ಅಲ್ಲಿಂದ ಪಕ್ಕದ ಕಂದಕಕ್ಕೆ ಮೃತದೇಹಗಳನ್ನು ಎಸೆದಿದ್ದ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಯ ಸುಳಿವಿನ ಆಧಾರದಲ್ಲಿ ಪೊಲೀಸರು ಶವಗಳನ್ನು ಪತ್ತೆಹಚ್ಚಿದ್ದಾರೆ.
ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಾಧ್ಯತೆ
ಏಳು ಮೃತದೇಹಗಳೂ ಪತ್ತೆಯಾಗಿರುವ ಹಿನ್ನೆಲೆ ಮರಣೋತ್ತರ ಪರೀಕ್ಷೆ ಹಾಗೂ ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಬಳಿಕ ಎಲ್ಲ ಮೃತರ ಅಂತ್ಯಕ್ರಿಯೆಯನ್ನು ಒಂದೇ ಕಡೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ.





