ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ನ್ಯಾಯಾಲಯದಿಂದ ಕೊಂಚ ರಿಲೀಫ್ ಸಿಕ್ಕಿದೆ. ಮತ್ತೆ ಬೆನ್ನು ನೋವು ಕಾಣಿಸಿಕೊಂಡಿರುವ ಹಿನ್ನೆಲೆ ಸೂಕ್ತ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಆದರೆ, ಈ ಬಾರಿ ಹೊರಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡದೆ, ಜೈಲಿನ ಆವರಣದಲ್ಲಿಯೇ ಫಿಸಿಯೋಥೆರಪಿ ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ಪಡೆಯುವಂತೆ ಷರತ್ತುಬದ್ಧ ಅನುಮತಿ ನೀಡಿದೆ.
ನವೆಂಬರ್ 7ರಂದು ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯವು ಈ ಮಹತ್ವದ ಆದೇಶ ಹೊರಡಿಸಿದೆ. ಕಳೆದ ಮೂರು ದಿನಗಳಿಂದ ದರ್ಶನ್ ಅವರ ಅರ್ಜಿಯ ಕುರಿತು ಸುದೀರ್ಘ ವಿಚಾರಣೆ ನಡೆದಿತ್ತು. ದರ್ಶನ್ ಪರ ವಕೀಲರು ಮತ್ತು ವಿಶೇಷ ಸರ್ಕಾರಿ ಅಭಿಯೋಜಕರು ಮಂಡಿಸಿದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಅಂತಿಮವಾಗಿ ಜೈಲಿನಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ.
ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ
ನಟ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು, ನಿರಂತರ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಫಿಸಿಯೋಥೆರಪಿ ಪಡೆಯಲು ಅನುಮತಿ ನೀಡಬೇಕು ಎಂದು ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ದರ್ಶನ್ ಅವರು ಹೊರಗಿನ ಆಸ್ಪತ್ರೆಗೆ ತೆರಳುವ ಬದಲಿಗೆ ಜೈಲಿನ ಆವರಣದಲ್ಲಿಯೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಬಹುದು ಎಂದು ಆದೇಶಿಸಿದೆ. ಅಲ್ಲದೆ, ಬೆನ್ನು ನೋವಿಗೆ ಸಂಬಂಧಿಸಿದ ಇತರೆ ಅಗತ್ಯ ಚಿಕಿತ್ಸೆಗಳನ್ನೂ ಜೈಲಿನಲ್ಲಿಯೇ ಪಡೆಯಲು ಅನುಮತಿ ನೀಡಿದೆ. ಇದಕ್ಕಾಗಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಂತೆ ಜೈಲಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿದೆ.
ಎಲ್4, ಎಲ್5 ಭಾಗದಲ್ಲಿ ಸಮಸ್ಯೆ
2024ರಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ದರ್ಶನ್ ಬಂಧನಕ್ಕೊಳಗಾದ ಕೆಲ ತಿಂಗಳ ಬಳಿಕವೂ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿತ್ತು. ಆಗಲೂ ದರ್ಶನ್ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಆ ಸಂದರ್ಭದಲ್ಲಿ ವೈದ್ಯಕೀಯ ವರದಿಯಲ್ಲಿ ದರ್ಶನ್ ಅವರ ಬೆನ್ನುಮೂಳೆಯ ಎಲ್4 ಮತ್ತು ಎಲ್5 ಭಾಗದಲ್ಲಿ ಸಮಸ್ಯೆ ಇರುವುದು ಉಲ್ಲೇಖವಾಗಿತ್ತು. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಕಾಲುಗಳು ಬಲಹೀನಗೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು ಎಂಬುದು ದರ್ಶನ್ ಪರ ವಕೀಲರ ವಾದವಾಗಿತ್ತು. ಅಲ್ಲದೆ, ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಇದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ನಂತರ ದರ್ಶನ್ ಅವರಿಗೆ ಜಾಮೀನು ಮಂಜೂರಾಗಿತ್ತು.
ಕಳೆದ ಬಾರಿ ನಡೆದಿದ್ದೇನು? ಎಸ್‌ಪಿಪಿ ಆಕ್ಷೇಪವೇನು?
ಇದೀಗ ಮತ್ತೆ ಬೆನ್ನು ನೋವು ಮರುಕಳಿಸಿರುವ ಹಿನ್ನೆಲೆ ದರ್ಶನ್ ಚಿಕಿತ್ಸೆಗಾಗಿ ನ್ಯಾಯಾಲಯದ ಅನುಮತಿ ಕೋರಿದ್ದರು. ಈ ವೇಳೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು, ಕಳೆದ 15 ತಿಂಗಳುಗಳಿಂದ ದರ್ಶನ್ ಜೈಲಿನಲ್ಲಿದ್ದಾರೆ. ನೆಲದ ಮೇಲೆ ಹಾಸಿಗೆ ಹಾಕಿಕೊಂಡು ಮಲಗುತ್ತಿರುವುದರಿಂದ ಹಾಗೂ ಚಳಿಗಾಲದ ವಾತಾವರಣದಿಂದಾಗಿ ಬೆನ್ನು ನೋವು ಮತ್ತೆ ಕಾಣಿಸಿಕೊಂಡಿದೆ. ಹೀಗಾಗಿ ಅವರಿಗೆ ಸೂಕ್ತ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂದು ವಾದಿಸಿದ್ದರು.
ಆದರೆ, ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) ದರ್ಶನ್ ಅವರ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿಂದೆ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಜಾಮೀನು ಪಡೆದಿದ್ದರು. ಆದರೆ, ಜಾಮೀನು ದೊರೆತ ಬಳಿಕ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಿಂತ ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಹಾಗೂ ಸಿನಿಮಾ ಚಿತ್ರೀಕರಣದಲ್ಲೂ ತೊಡಗಿಸಿಕೊಂಡಿದ್ದರು ಎಂದು ವಾದಿಸಿದ್ದರು.
ಹೀಗಾಗಿ ಹಿಂದಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಸೂಕ್ತ ನಿರ್ಬಂಧಗಳೊಂದಿಗೆ ಆದೇಶ ನೀಡಬೇಕು ಎಂದು ಎಸ್‌ಪಿಪಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ದರ್ಶನ್‌ಗೆ ಸಿಕ್ಕ ರಿಲೀಫ್, ಹೊರಗಿನ ಆಸ್ಪತ್ರೆಗೆ ನೋ ಎಂಟ್ರಿ!
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ, ದರ್ಶನ್ ಅವರಿಗೆ ಜೈಲಿನಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಮಧ್ಯಮ ಮಾರ್ಗ ಅನುಸರಿಸಿದೆ. ವೈದ್ಯಕೀಯ ಚಿಕಿತ್ಸೆಗೆ ಅನುಮತಿ ನೀಡಿದ್ದರೂ, ಹೊರಗಿನ ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯವಿಲ್ಲದಂತೆ ಜೈಲಿನಲ್ಲಿಯೇ ಫಿಸಿಯೋಥೆರಪಿ ಮತ್ತು ಇತರ ಚಿಕಿತ್ಸೆಗಳನ್ನು ಒದಗಿಸಲು ಸೂಚಿಸಿದೆ.





