ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಕೌರಿಬೈಲು ಪ್ರದೇಶದಲ್ಲಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಮೃತಪಟ್ಟಿದೆ. ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನ ಚಿರತೆ ಮರಿಗೆ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಕೌರಿಬೈಲಿನಲ್ಲಿ ಈ ಘಟನೆ ನಡೆದಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿ ಚಿರತೆ ಮರಿ ಸಂಚರಿಸುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ವಾಹನದ ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಚಿರತೆ ಮರಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಸ್ಥಳೀಯರ ಪ್ರಕಾರ, ಮೇಳಿಗೆ ಹಾಗೂ ಕೌರಿಬೈಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಚಿರತೆಗಳು ವಾಸವಾಗಿವೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಈ ಭಾಗದಲ್ಲಿ ಆಗಾಗ್ಗೆ ಕಾಡುಪ್ರಾಣಿಗಳು ರಸ್ತೆಗೆ ಬರುವ ಸಾಧ್ಯತೆ ಇದೆ. ವಿಶೇಷವಾಗಿ ರಾತ್ರಿ ಮತ್ತು ಮುಂಜಾನೆಯ ಸಮಯದಲ್ಲಿ ಚಿರತೆಗಳು ರಸ್ತೆ ದಾಟುವುದು ಕಂಡುಬರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಮರಿ ಸಾವಿನ ಕುರಿತು ಅಗತ್ಯ ಮಾಹಿತಿಯನ್ನು ಕಲೆಹಾಕಿದ್ದು, ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಈ ಭಾಗದಲ್ಲಿ ಚಿರತೆಗಳ ಓಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಎಚ್ಚರಿಕೆ ಫಲಕಗಳನ್ನು ಅಳವಡಿಸುವುದರ ಜೊತೆಗೆ ರಾತ್ರಿ ವೇಳೆ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.





