ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ದಸರಾ ಸಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾದ ಐತಿಹಾಸಿಕ ವಜ್ರಮುಷ್ಠಿ ಜಟ್ಟಿ ಕಾಳಗವನ್ನು ಇದೇ ಮೊದಲ ಬಾರಿಗೆ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ನಿಗದಿತ ಮುಹೂರ್ತ ಮೀರಿದ ಹಿನ್ನೆಲೆ ಜಟ್ಟಿ ಕಾಳಗ ನಡೆಯದೆ ಖಾಸಗಿ ದರ್ಬಾರ್ ಅಂತ್ಯಗೊಂಡಿದೆ.
ಮೈಸೂರು ಅರಮನೆಯ ಸಂಪ್ರದಾಯದಂತೆ ವಿಜಯದಶಮಿಯಂದು ಖಾಸಗಿ ದರ್ಬಾರ್ ಬಳಿಕ ವಿಜಯಯಾತ್ರೆ ಹಾಗೂ ಜಂಬೂಸವಾರಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತದೆ. ಈ ಸಂದರ್ಭದಲ್ಲಿ ವಜ್ರಮುಷ್ಠಿ ಜಟ್ಟಿ ಕಾಳಗಕ್ಕೂ ವಿಶೇಷ ಮಹತ್ವವಿದೆ. ಆದರೆ ಈ ಬಾರಿ ಪೂಜೆ ಮತ್ತು ಜಟ್ಟಿಗಳ ಸಿದ್ಧತೆಯಲ್ಲಿ ವಿಳಂಬವಾದ ಕಾರಣ, ನಿಗದಿತ ಸಮಯದಲ್ಲಿ ಕಾಳಗ ನಡೆಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಏನಿದು ವಜ್ರಮುಷ್ಠಿ ಜಟ್ಟಿ ಕಾಳಗ?
ಮೈಸೂರು ದಸರಾ ಆಚರಣೆಯ ಭಾಗವಾಗಿರುವ ವಜ್ರಮುಷ್ಠಿ ಜಟ್ಟಿ ಕಾಳಗವು ರಾಜಮನೆತನದ ಪರಂಪರೆಯೊಂದಿಗೆ ನಂಟು ಹೊಂದಿದೆ. ಸಾಂಪ್ರದಾಯಿಕವಾಗಿ ಜಟ್ಟಿಗಳು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಳಗದಲ್ಲಿ ಪಾಲ್ಗೊಳ್ಳುತ್ತಾರೆ. ಮಟ್ಟಿ ಪೂಜೆಯ ನಂತರ ಶ್ವೇತ ವರಾಹಸ್ವಾಮಿ ದೇವಸ್ಥಾನದ ಬಳಿ ಸಿದ್ಧತೆ ಮಾಡಿಕೊಂಡು, ಕರಿಕಲ್ ತೊಟ್ಟಿಯಲ್ಲಿ ಸೆಣಸಾಟ ನಡೆಸುವುದು ಈ ಆಚರಣೆಯ ಭಾಗವಾಗಿದೆ.
ರಾಜಮನೆತನದ ಮುಂದೆ ಜಟ್ಟಿಗಳು ತಮ್ಮ ಪರಂಪರೆಯ ನಿಷ್ಠೆ ಪ್ರದರ್ಶಿಸುವ ಈ ಕಾಳಗದಲ್ಲಿ ರಕ್ತ ಸುರಿಯುವಷ್ಟು ತೀವ್ರವಾದ ಸೆಣಸಾಟ ನಡೆಯುತ್ತದೆ. ಹೀಗಾಗಿ ದಸರಾ ಸಂಪ್ರದಾಯದಲ್ಲಿ ಈ ಆಚರಣೆಗೆ ವಿಶಿಷ್ಟ ಸ್ಥಾನವಿದೆ.
ಬೆಳಗ್ಗೆಯಿಂದ ಕಾದಿದ್ದ ಜಟ್ಟಿಗಳು
ಈ ಬಾರಿ ಜಟ್ಟಿ ಕಾಳಗದಲ್ಲಿ ಭಾಗವಹಿಸಲು ಮೈಸೂರು, ಬೆಂಗಳೂರು, ಚನ್ನಪಟ್ಟಣ ಮತ್ತು ಚಾಮರಾಜನಗರದಿಂದ ನಾಲ್ವರು ಜಟ್ಟಿಗಳು ಆಗಮಿಸಿದ್ದರು. ಮೈಸೂರಿನ ಮಹೇಶ್ ಜೆಟ್ಟಿ, ಬೆಂಗಳೂರಿನ ಚೇತನ್ ಜೆಟ್ಟಿ, ಚಾಮರಾಜನಗರದ ಸತೀಶ್ ಜೆಟ್ಟಿ ಹಾಗೂ ಚನ್ನಪಟ್ಟಣದ ತೇಜಸ್ ಶೆಟ್ಟಿ ಕಾಳಗದಲ್ಲಿ ಪಾಲ್ಗೊಳ್ಳಬೇಕಿತ್ತು.
ಮೈಸೂರು ಮತ್ತು ಬೆಂಗಳೂರು ಜಟ್ಟಿಗಳ ನಡುವೆ ಒಂದು ಸುತ್ತು ಹಾಗೂ ಚನ್ನಪಟ್ಟಣ ಮತ್ತು ಚಾಮರಾಜನಗರದ ಜಟ್ಟಿಗಳ ನಡುವೆ ಮತ್ತೊಂದು ಸುತ್ತಿನ ಸೆಣಸಾಟ ನಡೆಯಬೇಕಿತ್ತು. ಇದಕ್ಕಾಗಿ ಜಟ್ಟಿಗಳು ಬೆಳಗ್ಗೆಯಿಂದಲೇ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರು. ಬೆಳಗ್ಗೆ 9 ಗಂಟೆಯ ವೇಳೆಗೆ ಅವರು ಕಾಳಗಕ್ಕೆ ಸಜ್ಜಾಗಿದ್ದರು. ಆದರೆ ವಜ್ರಮುಷ್ಠಿ ಕಾಳಗದ ಪೂಜೆ ಆರಂಭವಾಗದ ಕಾರಣ ಮುಂದಿನ ಪ್ರಕ್ರಿಯೆ ವಿಳಂಬವಾಯಿತು.
ಪಾಸ್ ವಿಚಾರವಾಗಿ ವಾಗ್ವಾದ?
ಜಟ್ಟಿಗಳು ಮತ್ತು ಅವರ ಕಡೆಯವರಿಗೆ ಪ್ರವೇಶ ಪಾಸ್ ವಿಚಾರವಾಗಿ ಪೊಲೀಸರು ಅನುಮತಿ ನೀಡಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಪೊಲೀಸರು ಹಾಗೂ ಜಟ್ಟಿಗಳ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಮತ್ತೊಂದೆಡೆ, ಪೂಜೆ ಮತ್ತು ಸಿದ್ಧತೆಗಳಲ್ಲಿನ ವಿಳಂಬವೂ ಕಾಳಗದ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿತು.
ನಿಗದಿತ ಮುಹೂರ್ತ ಮೀರಿದರೆ ವಿಜಯಯಾತ್ರೆಯ ಪೂಜೆ ನಡೆಸಲು ಸಮಸ್ಯೆಯಾಗಬಹುದು ಎಂಬ ಆತಂಕ ಎದುರಾಯಿತು. ಆರಂಭದಲ್ಲಿ ಬನ್ನಿ ಪೂಜೆಯ ಬಳಿಕ ಜಟ್ಟಿ ಕಾಳಗ ನಡೆಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದ್ದರೂ, ಅಂತಿಮವಾಗಿ ಕಾಳಗವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
ಕಾಳಗವಿಲ್ಲದೇ ಅಂತ್ಯಗೊಂಡ ಖಾಸಗಿ ದರ್ಬಾರ್
ಜಟ್ಟಿ ಕಾಳಗಕ್ಕಾಗಿ ಕಾಯುತ್ತಿದ್ದವರಿಗೆ ಈ ಬೆಳವಣಿಗೆ ನಿರಾಸೆ ಮೂಡಿಸಿದೆ. ಕೊನೆಗೆ ರಾಜವಂಶಸ್ಥ ಯದುವೀರ್ ಅವರು ವಿಜಯಯಾತ್ರೆಗೆ ತೆರಳಿದ್ದು, ಜಟ್ಟಿ ಕಾಳಗ ನಡೆಯದೇ ಖಾಸಗಿ ದರ್ಬಾರ್ ಪ್ರಕ್ರಿಯೆ ಅಂತ್ಯಗೊಂಡಿದೆ.





