ಝಾನ್ಸಿ (ಉತ್ತರ ಪ್ರದೇಶ): ನಟಿ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ. 2010ರಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಝಾನ್ಸಿಯ ನ್ಯಾಯಾಲಯವು ಈ ವಾರೆಂಟ್ ಹೊರಡಿಸಿದೆ. ವಿವಾದಗಳು ಮತ್ತು ಚಿತ್ರ ವಿಚಿತ್ರ ಹೇಳಿಕೆಗಳಿಂದ ಸುದ್ದಿಯಲ್ಲಿರುವ ರಾಖಿ ಸಾವಂತ್ ಇದೀಗ ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
2010ರಲ್ಲಿ ಪ್ರಸಾರವಾದ ‘ರಾಖಿ ಕಾ ಇನ್ಸಾಫ್’ ಎಂಬ ಹೆಸರಿನ ಟಿವಿ ಶೋನಲ್ಲಿ ಸ್ಥಳೀಯ ನಿವಾಸಿಯೊಬ್ಬರ ವಿರುದ್ಧ ಆಕ್ಷೇಪಾರ್ಹ ಹಾಗೂ ಅವಮಾನಕರ ಹೇಳಿಕೆಗಳನ್ನು ನೀಡಿದ ಹಾಗೂ ಆ ಮೂಲಕ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಜಾಮೀನು ರಹಿತ ವಾರೆಂಟ್ ಅನ್ನು ನ್ಯಾಯಾಲಯ ಹೊರಡಿಸಿದೆ. ಈ ಶೋನ ನಿರೂಪಣೆಯನ್ನು ರಾಖಿ ಸಾವಂತ್ ಮಾಡುತ್ತಿದ್ದರು. ಆ ಶೋನಲ್ಲಿ ನೀಡಿದ ಹೇಳಿಕೆಯಿಂದಾಗಿ ಇದೀಗ ಅವರು ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ವರ್ಷಗಳಿಂದ ನಡೆಯುತ್ತಿರುವ ವಿಚಾರಣೆ
ಪ್ರಕರಣದ ವಿಚಾರಣೆ ವರ್ಷಗಳಿಂದಲೂ ನಡೆಯುತ್ತಿದ್ದು, ರಾಖಿ ಸಾವಂತ್ ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಗೈರುಹಾಜರಾದ ಹಿನ್ನೆಲೆ ಸಿವಿಲ್ ಜಡ್ಜ್ ಅಂಜಲಿ ಅವರು ಶುಕ್ರವಾರ ಈ ವಾರೆಂಟ್ ಜಾರಿಗೊಳಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ ಮೃದುಲ್ ಕಾಂತ್ ಶ್ರೀವಾಸ್ತವ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಯ ವಿವರ
ಝಾನ್ಸಿಯ ಹನ್ಸಾರಿ ಪ್ರೇಮ್ ನಗರ ಪ್ರದೇಶದ ನಿವಾಸಿ ಲಕ್ಷ್ಮಣ್ ಅಹಿರ್ವಾರ್ ಎಂಬವರು ‘ರಾಖಿ ಕಾ ಇನ್ಸಾಫ್’ ಟಿವಿ ಶೋನಲ್ಲಿ ಭಾಗಿಯಾಗಿದ್ದರು. ಆ ಬಳಿಕ ಲಕ್ಷ್ಮಣ್ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಖಿ ನೀಡಿದ ಹೇಳಿಕೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು. ಲಕ್ಷ್ಮಣ್ ಅವರ ತಾಯಿ ಸಾವಿತ್ರಿ ಅವರು ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 2010ರ ಅಕ್ಟೋಬರ್ನಲ್ಲಿ ಪ್ರಸಾರವಾದ ಶೋನ ಸಂಚಿಕೆಯೊಂದರಲ್ಲಿ ರಾಖಿ ತನ್ನ ಮಗನ ವಿರುದ್ಧ ಅವಮಾನಕರ ಮತ್ತು ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ, ಅದರಿಂದಲೇ ಮನನೊಂದು ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದರು.
ಶೋನ ಹಿನ್ನೆಲೆ
ರಾಜಗಢ ಮೂಲದ ಲಕ್ಷ್ಮಣ್ ಮತ್ತು ಅವರ ಪತ್ನಿ ಅನಿತಾ ಅವರ ನಡುವೆ ಕೌಟುಂಬಿಕ ಕಲಹವಿದ್ದ ಕಾರಣ ಅವರನ್ನು ಈ ಶೋಗೆ ಆಹ್ವಾನಿಸಲಾಗಿತ್ತು. ದಂಪತಿಗಳ ನಡುವೆ ಇದ್ದ ಜಗಳವನ್ನು ಸರಿ ಮಾಡಲು ರಾಖಿ ಪ್ರಯತ್ನಿಸಿದ್ದರು. ಈ ವೇಳೆ ಪತಿ ಲಕ್ಷ್ಮಣ್ ವಿರುದ್ಧ ರಾಖಿ ಕೆಲ ಮಾತುಗಳನ್ನಾಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಲಕ್ಷ್ಮಣ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯು ಆಗ ಸಾಕಷ್ಟು ವಿವಾದ ಸೃಷ್ಟಿಸಿತ್ತು.
ಜಾಮೀನು ರಹಿತ ಬಂಧನ ವಾರೆಂಟ್ ಎಂದರೆ ಪೊಲೀಸರು ಆರೋಪಿಯನ್ನು ಯಾವುದೇ ಜಾಮೀನು ಇಲ್ಲದೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ರಾಖಿ ಸಾವಂತ್ ಈಗ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.





