ಬೆಂಗಳೂರು: ಕೇವಲ ರೂ. 600 ಹಣದ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್ (21) ಕೊಲೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಳನಿ ಎಂಬಾತನನ್ನು ಸಿಕೆ ಅಚ್ಚುಕಟ್ಟು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಂಜುನಾಥ್ ಹಾಗೂ ಆರೋಪಿ ಪಳನಿ ಇಬ್ಬರೂ ಗಾರೆ ಮತ್ತು ಪೈಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಬ್ಬರೂ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪಳನಿ ತನ್ನ ಮೊಬೈಲ್ ಫೋನ್ ಅನ್ನು ಮಂಜುನಾಥ್ ಬಳಿ ರೂ. 600ಕ್ಕೆ ಅಡಮಾನ ಇಟ್ಟಿದ್ದ. ಕುಡಿಯಲು ಹಣದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಮೊಬೈಲ್ ಅನ್ನು ಅಡಮಾನ ಇಟ್ಟಿದ್ದ ಎನ್ನಲಾಗಿದೆ.
ನಿನ್ನೆ ಸಂಜೆ ಮೊಬೈಲ್ ವಾಪಸ್ ನೀಡುವಂತೆ ಪಳನಿ, ಮಂಜುನಾಥ್ ಬಳಿ ಕೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇಬ್ಬರೂ ತಮ್ಮ ತಮ್ಮ ದಾರಿ ಹಿಡಿದಿದ್ದರು. ಮಂಜುನಾಥ್ ಮನೆಗೆ ತೆರಳಿ ಊಟ ಮಾಡಿಕೊಂಡು ಮತ್ತೆ ಹೊರಗೆ ಬಂದಿದ್ದಾನೆ.
ಇತ್ತ ಕುಡಿದ ಮತ್ತಿನಲ್ಲಿದ್ದ ಪಳನಿ ಮತ್ತೆ ಮಂಜುನಾಥ್ ಜೊತೆ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಮಂಜುನಾಥ್ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಜಿಬಿಎ ಕಚೇರಿ ಕಾಂಪೌಂಡ್ ಬಳಿ ಮಲಗಿದ್ದ. ಗಾಢ ನಿದ್ರೆಯಲ್ಲಿದ್ದ ವೇಳೆ ಪಳನಿ ಮರದ ದೊಣ್ಣೆಯಿಂದ ಮಂಜುನಾಥನ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ.
ದೊಣ್ಣೆಯಿಂದ ತಲೆಗೆ ಬಿದ್ದ ಬಲವಾದ ಹೊಡೆತದಿಂದ ತೀವ್ರ ರಕ್ತಸ್ರಾವವಾಗಿ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ಮಂಜುನಾಥ್ ಕುಡಿತದ ಚಟಕ್ಕೆ ಒಳಗಾಗಿದ್ದ ಎನ್ನಲಾಗಿದ್ದು, ಈ ಹಿಂದೆ ಕುಟುಂಬಸ್ಥರಿಗೂ ಕಿರುಕುಳ ನೀಡುತ್ತಿದ್ದ ಕಾರಣ ಮನೆಯವರು ಆತನನ್ನು ಮನೆಗೆ ಸೇರಿಸಿಕೊಳ್ಳುತ್ತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಕಾಲೋನಿ ಪ್ರದೇಶದಲ್ಲಿ ನಡೆದಿದೆ.





