ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ತನಿಖೆಯ ವೇಳೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಪುಣೆ ಪೊಲೀಸರು ಸಲ್ಲಿಸಿರುವ 5,053 ಪುಟಗಳ ಆರೋಪಪಟ್ಟಿಯಲ್ಲಿ, ಕೇತನ್‌ನನ್ನು ಕೊಲೆ ಮಾಡುವುದಕ್ಕೂ ಮುನ್ನ ಆತನ ಮೇಲೆ ಹಲ್ಲೆ ನಡೆಸಿ ಕೈಕಾಲು ಮುರಿಸಲು ಬೆಂಗಳೂರಿಗೆ ಕರೆತರುವ ಯೋಜನೆ ರೂಪಿಸಲಾಗಿತ್ತು ಎಂಬ ಅಂಶ ಉಲ್ಲೇಖವಾಗಿದೆ.
ಪೊಲೀಸರ ಆರೋಪಪಟ್ಟಿಯ ಪ್ರಕಾರ, ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ರಿತೇಶ್ ಹಾಂಗೆ, ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತನೊಂದಿಗೆ ಕೇತನ್‌ನನ್ನು ಬೆಂಗಳೂರಿಗೆ ಕರೆತಂದು ಕೈಕಾಲು ಮುರಿಸುವ ಕುರಿತು ಚರ್ಚಿಸಿದ್ದ ಎನ್ನಲಾಗಿದೆ. ಆದರೆ ಬೆಂಗಳೂರಿನಲ್ಲಿದ್ದ ಆ ಸ್ನೇಹಿತ ಈ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ ಎಂದು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ. ಬಳಿಕ ಕೇತನ್‌ನನ್ನು ಬೇರೆಡೆಗೆ ಕರೆದುಕೊಂಡು ಹೋಗಿ ಕೊಲೆ ಮಾಡುವ ಯೋಜನೆ ರೂಪಿಸಲಾಯಿತು ಎಂದು ಪೊಲೀಸರು ಆರೋಪಿಸಿದ್ದಾರೆ.
25 ವರ್ಷದ ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರ ನಿಶ್ಚಿತಾರ್ಥ ಫೆಬ್ರವರಿಯಲ್ಲಿ ನಡೆದಿತ್ತು. ನವೆಂಬರ್‌ನಲ್ಲಿ ಜೈಪುರದಲ್ಲಿ ಇವರ ವಿವಾಹ ನಡೆಯಬೇಕಿತ್ತು ಎನ್ನಲಾಗಿದೆ. ಆದರೆ ಸಿಯಾಗೆ ಕೇತನ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಪ್ರಕಾರ, ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೇತನ್‌ನನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು. ಈ ಪ್ರಕರಣದಲ್ಲಿ ರಿತೇಶ್ ಹಾಂಗೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಪ್ಲ್ಯಾನ್ ವಿಫಲ
ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ ವಿವರಗಳ ಪ್ರಕಾರ, ಕೇತನ್‌ನನ್ನು ನೇರವಾಗಿ ಕೊಲೆ ಮಾಡುವುದಕ್ಕೂ ಮುನ್ನ ಆತನಿಗೆ ಗಂಭೀರವಾಗಿ ಹಲ್ಲೆ ನಡೆಸುವ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಬೆಂಗಳೂರಿನ ಸಂಪರ್ಕವನ್ನು ಬಳಸಿಕೊಳ್ಳಲು ಪ್ರಯತ್ನಿಸಲಾಗಿತ್ತು ಎನ್ನಲಾಗಿದೆ.
ಕೇತನ್‌ನ ಕೈಕಾಲು ಮುರಿಸುವ ಯೋಜನೆಗೆ ಬೆಂಗಳೂರಿನಲ್ಲಿದ್ದ ಸ್ನೇಹಿತ ಒಪ್ಪದ ಹಿನ್ನೆಲೆಯಲ್ಲಿ ಆ ಯೋಜನೆ ಕೈಬಿಡಲಾಯಿತು ಎಂದು ಪೊಲೀಸರು ಆರೋಪಿಸಿದ್ದಾರೆ. ನಂತರ ಕೇತನ್‌ನನ್ನು ಪುಣೆಯ ಲೋಹಗಢ ಕೋಟೆ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡುವ ಯೋಜನೆ ರೂಪಿಸಲಾಯಿತು ಎನ್ನಲಾಗಿದೆ.
ಲೋಹಗಢ ಕೋಟೆಯಲ್ಲಿ ಕೊಲೆ
ಪೊಲೀಸರ ಆರೋಪದಂತೆ, ಕೇತನ್‌ನನ್ನು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಪುಣೆಯ ಲೋಹಗಢ ಕೋಟೆ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಕೇತನ್‌ನನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಲಾಗಿದೆ ಎಂದು ತನಿಖಾ ವರದಿ ಹೇಳುತ್ತದೆ.
ಈ ಪ್ರಕರಣದ ತನಿಖೆಯಲ್ಲಿ ಆರೋಪಿಗಳ ನಡುವಿನ ಸಂಪರ್ಕ, ಅವರ ಮೊಬೈಲ್ ಫೋನ್‌ಗಳು, ಸಂಭಾಷಣೆಗಳು ಹಾಗೂ ಇತರ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಕೊಲೆ ಪ್ಲ್ಯಾನ್‌ಗೆ ಸಿನಿಮಾ, ಪಾಡ್‌ಕಾಸ್ಟ್ ಮೊರೆ?
ಇನ್ನು ಪ್ರಕರಣದ ಮತ್ತೊಂದು ಕುತೂಹಲಕಾರಿ ಅಂಶವೂ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ. ಕೇತನ್‌ನನ್ನು ಕೊಲೆ ಮಾಡುವ ಯೋಜನೆ ರೂಪಿಸುವ ಸಂದರ್ಭದಲ್ಲಿ ಆರೋಪಿಗಳು ಕೊಲೆ ಕುರಿತ ಸಿನಿಮಾಗಳನ್ನು ವೀಕ್ಷಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಸಿಕ್ಕಿಬೀಳದಂತೆ ಹೇಗೆ ತಪ್ಪಿಸಿಕೊಳ್ಳಬಹುದು ಎಂಬ ವಿಚಾರಕ್ಕೆ ಸಂಬಂಧಿಸಿದ ಪಾಡ್‌ಕಾಸ್ಟ್‌ಗಳನ್ನು ಕೂಡ ಆರೋಪಿಗಳು ಕೇಳಿದ್ದರು ಎನ್ನಲಾಗಿದೆ. ಈ ಅಂಶಗಳು ಪ್ರಕರಣದ ತನಿಖೆಯಲ್ಲಿ ಪೊಲೀಸರ ಗಮನ ಸೆಳೆದಿವೆ.





