ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಭೈರಮಂಗಲ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದ ರೈತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಿಡದಿ ಟೌನ್ ಪೊಲೀಸ್ ಠಾಣೆಯಲ್ಲಿ 15ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ರಸ್ತೆ ತಡೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಸುಮೋಟೊ ಪ್ರಕರಣ ದಾಖಲಿಸಲಾಗಿದೆ.
ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಬಿಡದಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರ ವಿರೋಧ ಮುಂದುವರಿದಿದೆ. ಯೋಜನೆಯಿಂದ ಕೃಷಿ ಜಮೀನು, ರೈತರ ಜೀವನೋಪಾಯ ಹಾಗೂ ಗ್ರಾಮೀಣ ಪ್ರದೇಶದ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಚಾರವಾಗಿ ಭೈರಮಂಗಲ ಗ್ರಾಮದಲ್ಲಿ ರೈತರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದರು.
ಪ್ರತಿಭಟನೆಯ ವೇಳೆ ರಸ್ತೆಯಲ್ಲಿ ಕುಳಿತು ಘೋಷಣೆಗಳನ್ನು ಕೂಗಿದ ರೈತರು, ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ತಮ್ಮ ಆಕ್ಷೇಪಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ರಸ್ತೆ ತಡೆದ ಹಿನ್ನೆಲೆ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಿಡದಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ದೇವರಾಜು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಗಿರೀಶ್, ಚೇತನ್, ಚಂದ್ರಶೇಖರ್, ನಾಗೇಶ್, ಶಿವರುದ್ರಪ್ಪ, ವಿರೇಶ್, ಪುಟ್ಟಸ್ವಾಮಯ್ಯ, ಬೈರಪ್ಪ, ಕೃಷ್ಣಪ್ಪ, ನಾಗರಾಜು ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಜಯಮ್ಮ, ಜಯಲಕ್ಷ್ಮಿ, ಶ್ವೇತಾ, ಭಾಗ್ಯ ಮತ್ತು ನೇತ್ರಾ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ರಸ್ತೆ ತಡೆ ಆರೋಪ
ಪೊಲೀಸರ ದೂರಿನ ಪ್ರಕಾರ, ಪ್ರತಿಭಟನೆಯ ಸಂದರ್ಭದಲ್ಲಿ ರಸ್ತೆ ತಡೆದಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಸಂಚಾರಕ್ಕೂ ತೊಂದರೆಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿರುವುದು ಇದೀಗ ಬಿಡದಿ ಟೌನ್‌ಶಿಪ್ ವಿವಾದಕ್ಕೆ ಮತ್ತೊಂದು ತಿರುವು ನೀಡಿದೆ.





