ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ವೇಳೆ ಸಂಭವಿಸಿದ ಅವಘಡವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ರಾಜಕಾರಣಿ ಆಶಿಷ್ ಶೆಲಾರ್ ಅವರ ನಿವಾಸದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗಣಪತಿ ದರ್ಶನ ಮುಗಿಸಿ ಹೊರಬರುತ್ತಿದ್ದ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾರಿನ ಚಕ್ರ ಅಭಿಮಾನಿಯೊಬ್ಬರ ಕಾಲಿಗೆ ತಗುಲಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಗಣೇಶೋತ್ಸವ ಕಾರ್ಯಕ್ರಮ ಮುಗಿಸಿ ಸಲ್ಮಾನ್ ಖಾನ್ ತಮ್ಮ ಕಾರಿನತ್ತ ತೆರಳುತ್ತಿದ್ದಂತೆ ಅವರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಟ ಕಾರು ಏರಿ ಕುಳಿತ ಬಳಿಕವೂ ಸ್ಥಳದಲ್ಲಿ ನೂಕುನುಗ್ಗಲು ಮುಂದುವರಿದಿತ್ತು. ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸುತ್ತುವರಿದಿದ್ದರಿಂದ ಪರಿಸ್ಥಿತಿ ಗೊಂದಲಮಯವಾಗಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರ ಚಾಲಕ ಕಾರನ್ನು ನಿಧಾನವಾಗಿ ಮುಂದಕ್ಕೆ ಚಲಿಸಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ನೂಕುನುಗ್ಗಲಿನ ನಡುವೆ ಕಾರಿನ ಚಕ್ರ ಅಭಿಮಾನಿಯೊಬ್ಬರ ಕಾಲಿನ ಮೇಲೆ ಹರಿದಿದೆ ಎಂದು ವರದಿಯಾಗಿದೆ. ನೋವಿನಿಂದ ಅಭಿಮಾನಿ ಕಿರುಚಾಡುತ್ತಿದ್ದಂತೆ ಸುತ್ತಮುತ್ತಲಿದ್ದವರು ಹಾಗೂ ಪಾಪರಾಜಿಗಳು ಕಾರನ್ನು ಸ್ವಲ್ಪ ಹಿಂದಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಕಾರಿನೊಳಗಿದ್ದ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಗೆ ಗಾಯವಾಗಿರುವುದನ್ನು ಕಂಡು ಚಾಲಕನಿಗೆ ಗದರಿಸಿ, ಕಾರನ್ನು ಜನಸಂದಣಿಯಿಂದ ದೂರ ಸರಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಚಾಲಕನ ಕೈಗೆ ನಟ ಹೊಡೆದಿರುವ ದೃಶ್ಯವೂ ವೈರಲ್ ವಿಡಿಯೋದಲ್ಲಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಅಭಿಮಾನಿಗೆ ಗಾಯವಾಗುತ್ತಿರುವುದನ್ನು ಗಮನಿಸಿ ಸಲ್ಮಾನ್ ತಕ್ಷಣ ಚಾಲಕನನ್ನು ತಡೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದೆಡೆ, ಚಾಲಕನೊಂದಿಗೆ ನಟ ವರ್ತಿಸಿದ ರೀತಿಯನ್ನು ಕೆಲವರು ಟೀಕಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮತ್ತೊಂದು ದೃಶ್ಯವೂ ಗಮನ ಸೆಳೆದಿದೆ. ಜನಸಂದಣಿಯ ನಡುವೆ ಸಣ್ಣ ಮಗುವೊಂದು ಸಲ್ಮಾನ್ ಖಾನ್ ಅವರೊಂದಿಗೆ ಹಸ್ತಲಾಘವ ಮಾಡಲು ಮುಂದಾಗಿತ್ತು. ಈ ವೇಳೆ ಭದ್ರತಾ ಸಿಬ್ಬಂದಿ ಮಗುವನ್ನು ತಳ್ಳದಂತೆ ಸಲ್ಮಾನ್ ತಡೆದಿದ್ದಾರೆ ಎನ್ನಲಾಗಿದೆ. ಬಳಿಕ ಮಗುವನ್ನು ಸುರಕ್ಷಿತವಾಗಿ ಜನಸಂದಣಿಯಿಂದ ಹೊರಗೆ ಕಳುಹಿಸಿದ ನಂತರವೇ ಅವರು ಕಾರು ಹತ್ತಿದರು ಎನ್ನಲಾಗಿದೆ..





