ತಿರುಮಲ, ಸೆಪ್ಟೆಂಬರ್ 13: ಕಲಿಯುಗ ವೈಕುಂಠ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಅಧಿಕ ಮಾಸದ ಹಿನ್ನೆಲೆ ಈ ಬಾರಿ ಶ್ರೀವಾರಿಗೆ ಎರಡು ಬ್ರಹ್ಮೋತ್ಸವಗಳು ನಡೆಯಲಿದ್ದು, ಮೊದಲಿಗೆ ಭಾದ್ರಪದ ಮಾಸದಲ್ಲಿ ಸಾಲಕಟ್ಲ ಬ್ರಹ್ಮೋತ್ಸವ ಹಾಗೂ ಬಳಿಕ ಅಶ್ವಯುಜ ಮಾಸದಲ್ಲಿ ನವರಾತ್ರಿ ಬ್ರಹ್ಮೋತ್ಸವ ನಡೆಯಲಿದೆ.
ಸೆಪ್ಟೆಂಬರ್ 14ರಂದು ಸಂಜೆ 7ರಿಂದ 8 ಗಂಟೆಯ ನಡುವೆ ಅಂಕುರಾರ್ಪಣೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಸೆಪ್ಟೆಂಬರ್ 15ರಂದು ಸಂಜೆ 6.21ರಿಂದ 6.35ರ ನಡುವಿನ ಮೀನ ಲಗ್ನದಲ್ಲಿ ಧ್ವಜಾರೋಹಣ ನೆರವೇರಲಿದೆ. ಸೆಪ್ಟೆಂಬರ್ 15ರಿಂದ 23ರವರೆಗೆ ಬ್ರಹ್ಮೋತ್ಸವ ವಿವಿಧ ಧಾರ್ಮಿಕ ಹಾಗೂ ವೈಭವೋಪೇತ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬ್ರಹ್ಮೋತ್ಸವದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಭಾಗಿ
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬ್ರಹ್ಮೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 15ರಂದು ರಾಜ್ಯ ಸರ್ಕಾರದ ಪರವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ರೇಷ್ಮೆ ವಸ್ತ್ರಗಳನ್ನು ಸಮರ್ಪಿಸಲಿರುವ ಅವರು, ಅದೇ ರಾತ್ರಿ ನಡೆಯುವ ಪ್ರಸಿದ್ಧ ಪೆದ್ದ ಶೇಷ ವಾಹನ ಸೇವೆಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಸೆಪ್ಟೆಂಬರ್ 16ರಂದು ನವೀಕರಿಸಿದ ಎಸ್ವಿ ವಸ್ತುಸಂಗ್ರಹಾಲಯ, ರಿಲಯನ್ಸ್ ಸಂಸ್ಥೆ ಕೊಡುಗೆಯಾಗಿ ನೀಡಿರುವ 25 ಎಲೆಕ್ಟ್ರಿಕ್ ಬಸ್ಗಳು ಹಾಗೂ ಭಕ್ತರ ಗುಂಪು ವಿಮಾ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಸಾಮಾನ್ಯ ಭಕ್ತರಿಗೆ ವಿಶೇಷ ಆದ್ಯತೆ
ಬ್ರಹ್ಮೋತ್ಸವದ ಸಂದರ್ಭದಲ್ಲಿ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಮಾನ್ಯ ಭಕ್ತರಿಗೆ ಸುಗಮ ಹಾಗೂ ತ್ವರಿತ ದರ್ಶನ ಕಲ್ಪಿಸುವ ಉದ್ದೇಶದಿಂದ ವಿವಿಧ ವಿಶೇಷ ದರ್ಶನಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಪ್ರೋಟೋಕಾಲ್ ಹೊಂದಿರುವ ಗಣ್ಯರಿಗೆ ಮಾತ್ರ ವಿಐಪಿ ಬ್ರೇಕ್ ದರ್ಶನ ಮುಂದುವರಿಯಲಿದ್ದು, ಶಿಫಾರಸು ಪತ್ರಗಳ ಮೂಲಕ ನೀಡಲಾಗುತ್ತಿದ್ದ ಬ್ರೇಕ್ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ವೃದ್ಧರು, ಅಂಗವಿಕಲರು ಹಾಗೂ ಶಿಶುಗಳ ಪೋಷಕರಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತು ದರ್ಶನವೂ ತಾತ್ಕಾಲಿಕವಾಗಿ ರದ್ದಾಗಲಿದೆ.
ಗರುಡ ಸೇವೆ, ಚಕ್ರಸ್ನಾನಕ್ಕೆ ಬಿಗಿ ಭದ್ರತೆ
ಬ್ರಹ್ಮೋತ್ಸವದ ಪ್ರಮುಖ ಆಕರ್ಷಣೆಯಾದ ಗರುಡ ಸೇವೆ ಹಾಗೂ ಅಂತಿಮ ದಿನ ನಡೆಯುವ ಚಕ್ರಸ್ನಾನಕ್ಕಾಗಿ ಟಿಟಿಡಿ ಮತ್ತು ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಿವೆ.
ನಾಲ್ಕು ಮಾದ ಬೀದಿಗಳ ಗ್ಯಾಲರಿಗಳ ಪ್ರವೇಶ-ನಿರ್ಗಮನ ವ್ಯವಸ್ಥೆ, ಸಿಸಿಟಿವಿ ನಿಯಂತ್ರಣ ಕೊಠಡಿ ಹಾಗೂ ಶ್ರೀವಾರಿ ಪುಷ್ಕರಿಣಿಯಲ್ಲಿ ಭಕ್ತರ ಪ್ರವೇಶ ಮಾರ್ಗಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಕಾಲ್ತುಳಿತ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಟಿಟಿಡಿ, ಗುಪ್ತಚರ ಮತ್ತು ಪೊಲೀಸ್ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ.
ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಇಡೀ ತಿರುಮಲ ಬೆಟ್ಟ ದೀಪಾಲಂಕಾರ ಹಾಗೂ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಭಕ್ತರನ್ನು ಸ್ವಾಗತಿಸಲು ಶ್ರೀಕ್ಷೇತ್ರ ಸಜ್ಜಾಗಿದೆ.





